ಕ್ಯಾನ್ಸರ್ ಇದೆ ಎಂದ ತಕ್ಷಣ ಭಯಪಡುವವರೇ ಹೆಚ್ಚು. ಇಂತಹ ಕ್ಯಾನ್ಸರ್‌ನಿಂದ ಬಳಲಿದವರು ಭಾರತಿ ಬಿ.ವಿ. ಆದರೆ ಇಲ್ಲೊಂದು ಚಿಕ್ಕ ಬದಲಾವಣೆ ಇದೆ. ಕ್ಯಾನ್ಸರ್ ರೋಗಕ್ಕೆ ವಿರುದ್ಧ ಸೆಟೆದು ನಿಂತು, ಗುಣವಾದ ಅವರು ಅದರ ನೋವಿನ ಸಮಯದಲ್ಲಾದ ಯಾತನೆ, ಆಲೋಚನೆಯನ್ನು ವಿವರಿಸಿದ್ದಾರೆ. ಈ ಕೃತಿಯಲ್ಲಿ ಸಾವಿಗೆ ಸಮೀಪದ ಕ್ಯಾನ್ಸರ್‌ನೊಂದಿಗಿನ ಹೋರಾಟವಿದೆ, ಕಾಯಿಲೆಯನ್ನು ಲಘುವಾಗಿ ಪರಿಗಣಿಸಿ ಉತ್ಸಾಹ ಚಿಮ್ಮಿಸುವ ಆಶಾದಾಯಕ ಭಾವಗಳಿವೆ, ಕಾಯಿಲೆಯೊಂದಿಗೆ ಮಲಗಿದ್ದಾಗಲೂ ಹಾಸ್ಯಪ್ರಜ್ಞೆಯಿದೆ, ಆಸ್ಪತ್ರೆಗೆ ಹೋದಾಕ್ಷಣ ಉಂಟಾಗುವ ಆಧ್ಯಾತ್ಮದ ಹೊಳಹುಗಳಿವೆ, ಎಲ್ಲಕ್ಕೂ ಮಿಗಿಲಾಗಿ ಕಾಯಿಲೆಯ ಬಗ್ಗೆ ಸಂಪೂರ್ಣ ವಿವರಗಳಿವೆ.
ಈ ಕೃತಿಯ ಬೆನ್ನುಡಿಯಲ್ಲಿ ಯು.ಆರ್.ಅನಂತಮೂರ್ತಿ ಅವರು ’ಸಾಸಿವೆ ತಂದವಳು ಎನ್ನುವ ಶೀರ್ಷಿಕೆಯೇ ನಮ್ಮನ್ನು ಒಂದು ಕ್ಷಣ ಹಿಡಿದು ನಿಲ್ಲಿಸುಸತ್ತದೆ. ಸಾವಿಲ್ಲದ ಮನೆಯಿಲ್ಲ ಎಂಬುದನ್ನು ತಿಳಿದು ಸಾಸಿವೆ ತರಲಾದರೇ ಹೋದವಳ ಕಥೆ ಇಲ್ಲಿ ಇನ್ನೊಂದು ಅರ್ಥವನ್ನೇ ಪಡೆಯುವಂತೆ ಮಾಡಿದೆ. ಏಕಕಾಲದಲ್ಲಿ ಅಂತರಂಗದ ಅನಿಸಿಕೆಯ ಸತ್ಯಗಳನ್ನೂ ಬಹಿರಂಗದಲ್ಲಿ ಓದುಗನಿಗಾಗಿ ಕೊಡಬೇಕಾದ ಬಿವರಗಳನ್ನು ಒಟ್ಟಾಗಿ ಹಿಡಿದಿಡುವ ಗಲ್ಯ ಇಲ್ಲ ಅಪೂರ್ವವಾದದ್ದು’ ಎಂದಿದ್ದಾರೆ.
ಕ್ಯಾನ್ಸರ್‌ನಂತಹ ಒಂದು ಕಾಯಿಲೆಯನ್ನು ಗೆಲ್ಲುವ ಪ್ರಯತ್ನದಲ್ಲಿ ಗೆಲುವು ಸೋಲು ಎರಡೂ ಒಟ್ಟೋಟ್ಟಿಗೆ ಎದುರಾಗುವ ಭರವಸೆಯೂ, ಸಂಕಟವೂ ಇದೆ. ಆತ್ಮ ಮರುಕದ ಉತ್ಕಟತೆಯಲ್ಲಿ ಸಾಯಬೇಕೆಂಬ ಅಪೇಕ್ಷೆಯೂ ಆಗಕೂಡದು. ಇದನ್ನು ಭಾರತಿ ಅವರು ಉತ್ತಮವಾಗಿ ಸಾಧಿಸಿದ್ದಾರೆ. ಈ ಕೃತಿಯೂ ಕ್ಯಾನ್ಸರ್ ರೋಗದಿಂದ ಬಳಲುವವರೂ ವೈದ್ಯಕೀಯ ಚಿಕಿತ್ಸೆ ಜೊತೆಗೆ ನೈತಿಕ ಸ್ಥೈರ್ಯವನ್ನು ಹೊಂದಿರಬೇಕು ಎಂಬುದನ್ನು ಬಿಚ್ಚಿಡುತ್ತದೆ. ಇದೊಂದು ಅನುಭವ ಕಥನವಾಗಿದ್ದು, ನಮ್ಮಲ್ಲಿಯೂ ಏನೆ ಬಂದರೂ ಎದುರಿಸುವೇ ಎನ್ನುವ ಸ್ಥೈರ್ಯವನ್ನು ಮೂಡಿಸುತ್ತದೆ.
©2024 Book Brahma Private Limited.