ಲಕ್ಷ್ಮೀಶ ತೋಳ್ವಾಡಿ ಕೃಷಿಕ, ಚಿಂತಕ ಮತ್ತು ವಿದ್ವಾಂಸರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಾಂತಿಗೋಡು ಗ್ರಾಮದವರು. ಇವರದು ತೋಳ್ಳಾಡಿತ್ತಾಯ ವೈದಿಕ ಮನೆತನ, ಉತ್ತುಬಿತ್ತು ಗೇಯುವ ಕಾಯಕ. ಆಡುಭಾಷೆ ತುಳು. ವೈದಿಕ ಮತ್ತು ವೈಚಾರಿಕ ನಿಲುವುಗಳನ್ನು ಪರಸ್ಪರ ಮುಖಾಮುಖಿಯಾಗಿಸಿದರು.
ತಾರುಣ್ಯದಲ್ಲಿ ಕೆಲ ಕಾಲ ಬೆಂಗಳೂರಿನಲ್ಲಿದ್ದರು. ವೈ.ಎನ್.ಕೆ, ಗೋಪಾಲಕೃಷ್ಣ ಅಡಿಗ, ಲಂಕೇಶ ಪತ್ರಿಕೆ, ಕಿ.ರಂ. ನಾಗರಾಜ ಅವರ ಒಡನಾಟ ಸಿಕ್ಕಿತ್ತು. ಭಕ್ತಿ-ವಿಭಕ್ತಿಗಳ ನಡುವಿನ ಆಧ್ಯಾತ್ಮಿಕ ವ್ಯಾಕರಣದ ಹುಡುಕಾಟ ತೀವ್ರಗೊಂಡು ಶಿವಮೊಗ್ಗಕ್ಕೆ ತೆರಳಿದಾಗ ಅಲ್ಲಿ ಸತ್ಯಕಾಮರ ಒಡನಾಟ ದಕ್ಕಿತು. ಪುತ್ತೂರಿನ ಅಜ್ಜನ ಸಾಧನೆಯ ಗವಿಯೊಳಗೆ ಕಂಡ ಬೆಳಕು ಕೆಲಕಾಲ ಇವರನ್ನು ಕೈಹಿಡಿದು ನಡೆಸಿತು. ಬುದ್ಧ, ಗಾಂಧಿಯವರ ಮಧ್ಯಮ ಮಾರ್ಗದ ಬೆರಗು ಇವರನ್ನು ಆವರಿಸಿತ್ತು. ಈ ಮಧ್ಯೆ ಸಿಕ್ಕಿದವರು ಸೂಫಿ ಬ್ಯಾರಿಗಳು, ಒಂದು ಗಿಡ ತನಗೆ ಬೇಕಾದ್ದನ್ನು ಮಣ್ಣಿನಿಂದ ಪಡೆದುಕೊಂಡು ಅದು ಏನು ಕೊಡಬೇಕೆಂದಿದೆಯೋ ಅದನ್ನು ಕೊಟ್ಟೇ ಕೊಡುತ್ತದೆ' ಎಂಬ ಸೂಫಿ ಬ್ಯಾರಿಯವರ ಮಾತುಗಳು ಇವರ ಮೇಲೆ ಗಾಢ ಪ್ಲರಬಾವ ಬೀರಿದವು. ಕುಮಾರಧಾರೆಗೆ ಅಣೆಕಟ್ಟು ಕಟ್ಟುವುದು ಸ್ಥಳೀಯ ರೈತರಿಗೆ ಹಾನಿಕಾರಕವೆನ್ನಿಸಿದಾಗ ಕಿಸಾನ್ ಸಂಘದ ಮೂಲಕ ಪ್ರತಿಭಟಿಸಿ ಯೋಜನೆಯನ್ನು ಹಿಮ್ಮೆಟ್ಟಿಸಲು ಕಾರಣರಾದರು. ರೈತಪರ, ಸ್ವದೇಶಿ ಚಳವಳಿಗಳಲ್ಲಿ ಭಾಗಿಯಾದರು. ಗ್ರಾಮಸ್ವರಾಜ್ಯದ ನಿರಂತರ ಕನಸು ಅವರದಾಗಿದೆ. .
ಆಧ್ಯಾತ್ಮಿಕ ನಿಗೂಢತೆಯನ್ನು ಜೀವನಪ್ರೀತಿಯ ಸರಳತೆಯನ್ನಾಗಿ ಕಾಣುವ ತುಡಿತದಲ್ಲಿಯೇ ಅವರ ಮಾತು, ಮೌನ, ಓದು, ಬರಹಗಳು ಸಾಗಿವೆ. ಇದೇ ಕಾರಣಕ್ಕಾಗಿ ವೇದ, ಉಪನಿಷತ್, ಪೌರಾಣಿಕ ಮಹಾಕಾವ್ಯಗಳ ಪದಗಳ ನಡುವಿನ ಮೌನವನ್ನು ಅವರಿಗೆ ಓದುವುದಕ್ಕೆ ಸಾಧ್ಯವಾಗಿದೆ. `ಗೋತ್ರಗಳು ಹುಟ್ಟಿನಿಂದ ಬರುವುದಿಲ್ಲ' ಎಂಬ ಸಮರ್ಥನೆಗಾಗಿ ಉಪನಿಷತ್‌ಗಳ ವಾಕ್ಯಗಳನ್ನು ಉದ್ದರಿಸಲು, ಬಂಧುಮೋಹ ತೊರೆದ ಅರ್ಜುನನೇಕೆ ಅಭಿಮನ್ಯು ಅಳಿದಾಗ ಅಳುತ್ತಾನೆ?' ಎಂಬ ಜಿಜ್ಞಾಸೆ ವ್ಯಕ್ತಪಡಿಸಲು ಅವರಿಗಷ್ಟೇ ಸಾಧ್ಯ. ಪುರಾಣವನ್ನು ಬಗೆಯುತ್ತ ಪೌರಾಣಿಕ ಬಿಂಬಗಳನ್ನು ಸಮಕಾಲೀನ ಕನ್ನಡಿಯ ಮುಂದೆ ತಂದು ನಿಲ್ಲಿಸುತ್ತ ಅವರು ಮಾತಿನ ಹಾರವನ್ನು ಪೋಣಿಸುತ್ತಾರೆ. ಆರ್ಷೇಯ ಜ್ಞಾನ ಮತ್ತು ಸಮಕಾಲೀನ ಅರಿವುಗಳ ಸಮಪಾಕದಲ್ಲಿ ಅವರ ವಚನಗಳು ಸಮನ್ವಯ ಪ್ರತಿಪಾದನೆಯ ಪ್ರವಚನಗಳಾಗುತ್ತವೆ. ಅವರದು ಕವಿ ಹೃದಯ, ಮಾತಿನಲ್ಲಿಯೂ ಮೌನದಲ್ಲಿಯೂ ಕಥನಕ್ಕಿಂತ ಕಾವ್ಯವೇ ಹೆಚ್ಚು. ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಭಗವದ್ಗೀತೆಯ ಬಗೆಗಿನ 'ಮಹಾಯುದ್ದಕ್ಕೆ ಮುನ್ನ' ಮೊದಲ ಪ್ರಕಟಿತ ಕೃತಿ. ಈ ಕೃತಿಯ ಬಗ್ಗೆ ಬಂದಿರುವ ಪತ್ರಿಕಾ ವಿಮರ್ಶೆಯಲ್ಲಿ 'ಆಧುನಿಕನಿಗೆ ಹೃದಯಸ್ಪರ್ಶಿ' ಎಂಬ ಮೆಚ್ಚುಗೆ ವ್ಯಕ್ತವಾಗಿತ್ತು. ಅಂತರ್ಜಾಲ ಪತ್ರಿಕೆಯಲ್ಲಿ ಭಾಗವತದ ಬಗ್ಗೆ ಬರೆದ ಸರಣಿ ಬರಹಗಳ ಸಂಕಲನ 'ಸಂಪಿಗೆ ಭಾಗವತ', 'ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ', 'ಭವ ತಲ್ಲಣ' (ತಾಳಮದ್ದಲೆ ಕುರಿತು) ಕೃತಿಗಳು ಪ್ರಕಟವಾಗಿವೆ.