ಈ ದೇಶದಲ್ಲಿ ಪೊಲೀಸ್ ಅಧಿಕಾರಿಗಳು, ಸೇನೆಯ ಹಿರಿಯ ನಾಯಕರು, ಹಿರಿಯ ಪತ್ರಕರ್ತರು ತಮ್ಮ ತಮ್ಮ ಬದುಕಿನ ಅನುಭವಗಳನ್ನು ಅದೇನೋ ಬಹುದೊಡ್ಡ ಸಂಗತಿಗಳಾಗಿ ತೆರೆದುಕೊಡುವುದು, ಮಾಧ್ಯಮಗಳಲ್ಲಿ ವಿಜೃಂಭಿಸುವುದನ್ನು ನಾವು ನೋಡಿದ್ದೇವೆ. ಆದರೆ ಇದೇ ವ್ಯವಸ್ಥೆಯ ತಳಸ್ತರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳು ಅಥವಾ ಸೇನೆಯ ಜವಾನರು ತಮ್ಮ ಆತ್ಮಕತೆಗಳನ್ನು ಬರೆದರೆ, ಅಥವಾ ತಮ್ಮ ಬದುಕನ್ನು ತೆರೆದಿಟ್ಟರೆ ಏನಾಗಬಹುದು? ಈ ಪ್ರಶ್ನೆಗೆ ಉತ್ತರಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲೇ ಓದುತ್ತಿದ್ದೇವೆ. ತನಗೆ ಸಿಗುವ ಆಹಾರ, ಸವಲತ್ತುಗಳನ್ನು - ಜಗತ್ತಿಗೆ ತೋಡಿಕೊಂಡ ಜವಾನನೊಬ್ಬ ಮೇಲಧಿಕಾರಿಗಳಿಂದ ಅನುಭವಿಸಿದ ದಯನೀಯ ಸ್ಥಿತಿಯನ್ನು. ಅಂತೆಯೇ ಓರ್ವ ಯೋಧ ಆತ್ಮಹತ್ಯೆ ಮಾಡಿಕೊಳ್ಳಬೇಕಾದಂತಹ ಸನ್ನಿವೇಶ, ಯಾವತ್ತೂ ಮೇಲ್ದರ್ಜೆಯ ಅಧಿಕಾರಿಗಳ ಆತ್ಮಕತೆಗಳು ರೋಚಕವಾಗಿರುತ್ತದೆ. ಇದೇ ಸಂದರ್ಭದಲ್ಲಿ ತಳಸ್ತರದ ಸಿಬ್ಬಂದಿ ಬಾಯಿತೆರೆದರೆ ಅದು ಆಘಾತಕಾರಿಯಾಗಿರುತ್ತದೆ. 'ಸೆಕ್ಯೂರಿಟಿ ಗಾರ್ಡ್'ಗಳಿಲ್ಲದ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ದ್ದೇವೆ. ಯೂನಿಫಾರ್ಮ್‌ಗಳನ್ನು ಹಾಕಿಕೊಂಡು, ಕೈಯಲ್ಲಿ ಲಾಠಿ, ವಿಸಿಲ್, ಕೆಲವೊಮ್ಮೆ ಸಣ್ಣ ದೊಂದು ಕೋವಿ ಹಿಡಿದು ನಿಂತಿರುವ ಇವರನ್ನು “ಉದ್ದಟರು' 'ಅಧಿಕ ಪ್ರಸಂಗಿಗಳು' ಎಂಬ ರೀತಿಯಲ್ಲೇ ಸಮಾಜ ಸ್ವೀಕರಿಸುತ್ತಾ ಬಂದಿದೆ. ಎಲ್ಲ ಪ್ರತಿಷ್ಠಿತ ಸಂಸ್ಥೆಗಳಿಗೂ ಇವರು ಅನಿವಾರ್ಯ. ಇಂದು ರಸ್ತೆ ಬದಿ ಸಾಲು ಸಾಲಾಗಿ ನಿಂತಿರುವ ಎಟಿಎಂಗಳ ಮುಂದೆ ಜೀವವನ್ನು ಒತ್ತೆಯಿಟ್ಟು ನಿಂತಿರುವ ಈ ಸೆಕ್ಯೂರಿಟಿ ಗಾರ್ಡ್‌ಗಳ ಸೇವೆಗಳಿಗೆ ಬೆಲೆಕಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ ಈ ತಳಸ್ತರದ ಸಿಬ್ಬಂದಿಯ ಒಳ ಬದುಕಿನ ದುಃಖ, ಸಂಕಟಗಳೇ ಬೇರೆಯದು. ಹೊಳೆನರಸೀಪುರ ಮಂಜುನಾಥ ಅವರು ಬರೆದಿರುವ 'ಭದ್ರತಾ ಲೋಕದಲ್ಲಿ' ಕೃತಿಯು ಸೆಕ್ಯೂರಿಟಿ ಬದುಕಿನ ಸುಖ-ದುಃಖಗಳನ್ನು ತೆರೆದಿಡುತ್ತದೆ.
©2024 Book Brahma Private Limited.