`ವೃತ್ತಿ ವೃತ್ತ' ಲೇಖಕ ವೆಂಕಟೇಶ ಎಂ.ಟಿ. ಅವರ ಅನುಭವ ಕಥನ. ಈ ಬರಹವು ‘ಪ್ರತಿಲಿಪಿ’ ಡಿಜಿಟಲ್ ಮಿಡಿಯಾದಲ್ಲಿ 32 ಕಂತುಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಬರಹ ಕುರಿತು ಲೇಖಕರ ಮಾತುಗಳು ಹೀಗಿವೆ ‘ನನ್ನ `ವೃತ್ತಿ ವೃತ್ತ'ವು ನಾನು ಮಾಡಿದ ನೌಕರಿ ಅಥವಾ ವೃತ್ತಿಗಳ ಕೆಲವು ನೆನಪುಗಳಷ್ಟೇ ಆಗಿರುತ್ತದೆ. ನನ್ನ ಬ್ಯಾಂಕ್ ವೃತ್ತಿಯು ನನ್ನ ವ್ಯಕ್ತಿತ್ವದ ಮೇಲೆ ಸಹಜವಾಗಿಯೇ ಅದರ ಪರಿಣಾಮ ಬೀರಿದೆ..ಅದು ಎಲ್ಲ ವೃತ್ತಿ ನೌಕರಿಗಳಲ್ಲಿದ್ದವರಲ್ಲೂ ಕಾಣಬಹುದಲ್ಲವೇ.? ಅನೇಕ ಬದುಕಿನ ಪಾಠಗಳನ್ನು ನಾನು ನನ್ನ ಬ್ಯಾಂಕ್ ವೃತ್ತಿಯಿಂದ ಕಲಿತೆ. ಅವುಗಳಳು ಹೀಗಿವೆ; ಯಾವುದೇ ವೃತ್ತಿ ಅಥವಾ ನೌಕರಿಯಾಗಲಿ, ಅವುಗಳದ್ದೇ ಆದ ರಹಸ್ಯಗಳನ್ನು ಅವು ಅಡಗಿಸಿಕೊಂಡಿರುತ್ತವೆ.! ಆ ರಹಸ್ಯಗಳ ಅರಿವು ನಮಗೆ ಉಂಟಾಗುವುದು ನಾವು ಆ ವೃತ್ತಿ ಅಥವಾ ನೌಕರಿಯಲ್ಲಿದ್ದಾಗ.ಆದರೆ ಕೆಲವೊಂದು ರಹಸ್ಯಗಳನ್ನು ಹೊರ ಹಾಕಬಾರದು...! ಅದೇ ವೃತ್ತಿ ಧರ್ಮ...! ಅದನ್ನು ನಾನೂ ಪಾಲಿಸಿರುವೆ... ಪರರ ಹಣಕ್ಕೆ ಅಥವಾ ಸಂಪತ್ತಿಗೆ ನಾವು ಆಸೆ ಪಡಬಾರದು ಎಂಬ ವಿಚಾರವು ಬ್ಯಾಂಕ್ ನಲ್ಲಿ ನಾವು ನೋಡುವ ಹಾಗೂ ಮುಟ್ಟುವ ಹಣ, ಚಿನ್ನ, ಮುಂತಾದ ಪರರ ಸ್ವತ್ತು ಸಂಪತ್ತುಗಳಿಂದ, ಅರ್ಥ ಮಾಡಿಕೊಳ್ಳ ಬಹುದಾಗಿದೆ. ಅದಕ್ಕೆ ಆಸೆಪಟ್ಟರೆ, ಆ ಕೆಟ್ಟ ಆಸೆ ನಮ್ಮನ್ನೇ ತಿಂದುಬಿಡುತ್ತದೆ....!’
(ಪುಸ್ತಕದ ಆಯ್ದ ಭಾಗ)
ಬ್ಯಾಂಕಿನ ಕೆಲಸ ನಿರ್ವಹಿಸಲು, ಅನುಸರಿಸಬೇಕಿದ್ದ ನಿರ್ದಿಷ್ಟ ಕ್ರಮಗಳನ್ನು, ಉಪೇಕ್ಷಿಸಿ ಕೆಲಸ ಮಾಡಿದರೆ ಹೀಗೆ ಆಗುವುದಲ್ಲವೇ...? ಇದು ನಿಮಗೂ ನನಗೂ ತಿಳಿಯುತ್ತದೆ... ಆದರೆ ನಮ್ಮ ಮ್ಯಾನೇಜರ್ ರಾಮದಾಸರಿಗೆ...?! ಮರುದಿನ, ಬ್ಯಾಂಕಿಗೆ ಬಂದ ಮ್ಯಾನೇಜರ್ ರವರಿಗೆ, ನಿನ್ನೆ ನಡೆದ ಗೋಲ್ಡ್ ಲೋನ್ ಎಡವಟ್ಟಿನ ವಿಚಾರ ಹೇಳಿದೆ...
“ಹೋ... ಹಾಗಾಯ್ತ... ಚಿನ್ನ ಅಲ್ಲೇ ಇತ್ತಲ್ಲ... ಬೇರೆಲ್ಲೂ ಹೋಗಿರಲಿಲ್ಲ ಅಲ್ವಾ...ಹೂಂ...?” ಎಂದುಬಿಟ್ಟರು ನಮ್ಮ ಮ್ಯಾನೇಜರ್...! ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಯಿತು ನನ್ನ ಪಾಡು...!! ಇರಲಿ ಬಿಡಿ... ಏನು ಮಾಡೋಕಾಗುತ್ತೆ...? ಇದರಲ್ಲಿ ಕಿನ್ನರಿಯದ್ದೂ ತಪ್ಪಿಲ್ಲ... ಕೋಣನದ್ದೂ ತಪ್ಪಿಲ್ಲ... ಹಾಗಾದರೆ ತಪ್ಪು ಯಾರದ್ದು ಎಂದು ಕೇಳಿದಿರಾ...? ಇನ್ಯಾರದ್ದು... ಕಿನ್ನರಿ ಬಾರಿಸಿದ ನನ್ನದೇ ತಪ್ಪು...!!!
ನಾಟಕದಲ್ಲಿ ಎರಡು ಪಾತ್ರಗಳಿದ್ದರೆ, ಅವರವರ ಪಾತ್ರ ಅವರವರೇ ಮಾಡಬೇಕು... ಅದನ್ನು ಉಪೇಕ್ಷಿಸಿ, ಒಬ್ಬರೇ ಎರಡೂ ಪಾತ್ರ ಮಾಡಿದರೆ...? ಆಗೋದೇ ಎಡವಟ್ಟು...!
©2024 Book Brahma Private Limited.