’ಬದುಕನ್ನು ಪ್ರೀತಿಸಬೇಕು ಅಥವಾ ಕನಿಷ್ಠ ಪಕ್ಷ ನಾಳೆಯಿಂದಾದರೂ ಪ್ರೀತಿಸಬೇಕು ಅಥವಾ ಇನ್ನಾದರೂ ಸರಿಯಾಗಿ ಅರ್ಥಮಾಡಿಕೊಂಡು ಪ್ರೀತಿಸಬೇಕು ಎಂದುಕೊಂಡ ಎಲ್ಲರಿಗಾಗಿ ಈ ನಿತ್ಯೋಪನಿಷತ್ತು’; ಎಂದಿರುವ ಮಹಾಬಲ ಸೀತಾಳಭಾವಿ ಅವರು ಜೋಗಿಯವರ ನಿತ್ಯೋಪನಿಷತ್ತು ಕೃತಿಯ ಮುನ್ನುಡಿಯಲ್ಲಿ ಬರೆಯುತ್ತಾ, ನನ್ನ ಪ್ರಕಾರ ಜೋಗಿಯವರು ಬರೆದ ನಿತ್ಯೋಪನಿಷತ್ತು ಆಧುನಿಕ ದರ್ಶನಗಳ ಅಪರೂಪದ ತುಣುಕು. ವಾಟ್ಸಾಪ್‌ಗೆ ಕಟ್ ಪೇಸ್ಟ್ ಮಾಡಿ ಊರೆಲ್ಲ ಸುತ್ತಾಡಿಸಬಹುದಾದ ಸಣ್ಣ ಸಣ್ಣ ಕ್ಯಾಪ್ಸೂಲ್ ಮಾದರಿಯ ತುಣುಕುಗಳಷ್ಟೇ ಇಂದಿನ ತಲೆಮಾರಿಗೆ ಅಕಸ್ಮಾತ್ತಾಗಿಯಾದರೂ ಕಣ್ಣಿಗೆ ಬಿದ್ದು, ಮುಂದೆ ರುಚಿಸಿದರೆ, ಹುಡುಕಿ ಓದಿಸಿಕೊಂಡು ಹೋಗುವ ಶಕ್ತಿ ಹೊಂದಿವೆ. ನಿತ್ಯೋಪನಿಷತ್ತಿನಲ್ಲಿ ನಿಸ್ಸಂಶಯವಾಗಿ ಅಂತಹ ಶಕ್ತಿಯಿದೆ. ಇಲ್ಲಿರುವ ಸುಮಾರು ಇನ್ನೂರು ಕ್ಯಾಪ್ಸೂಲುಗಳನ್ನು ದಿನಾ ಬೆಳಿಗ್ಗೆ ಒಂದು, ರಾತ್ರಿ ಒಂದು ತೆಗೆದುಕೊಂಡರೆ ಜೀವನಕ್ಕೆ ಒಳ್ಳೆಯದು. ಏಕೆಂದರೆ ಇವು ಬದುಕನ್ನು ಪ್ರೀತಿಸಲು ಕಲಿಸುತ್ತವೆ. ಬದುಕನ್ನು ಹೇಗೆ ನೋಡಬೇಕೆಂಬುದನ್ನು ಕಲಿಸುತ್ತವೆ. ನಾವು ನಿರ್ಲಕ್ಷಿಸುವ ದಿನನಿತ್ಯದ ಘಟನೆಗಳ ಒಳಗಿರುವ ಅಸಾಮಾನ್ಯ ಮಜಕೂರುಗಳನ್ನು ಹೊಳೆಯಿಸುತ್ತವೆ. ಎಂದೋ ಓದಿ ಬಿಟ್ಟ ಭಗವದ್ಗೀತೆಯ ಶ್ಲೋಕದಲ್ಲಿ ಎಷ್ಟೊಳ್ಳೆಯ ಜೀವನದ ಪಾಠವಿದೆ ಎಂಬುದನ್ನು ನೆನಪಿಸುತ್ತವೆ. ಅಜ್ಜಿ-ಅಜ್ಜ ಹೇಳಿರದ ಪುರಾಣದ ಕತೆಯನ್ನು ಹೇಳಿ ಅದರಲ್ಲಿರುವ ಗುಟ್ಟನ್ನು ತಿಳಿಸಿಕೊಡುತ್ತವೆ. ವೇದದಲ್ಲೋ, ಉಪನಿಷತ್ತಿನಲ್ಲೋ, ಅರಣ್ಯಕದಲ್ಲೋ ಅಥವಾ ಯಾವುದೋ ಬೃಹತ್ ಶಾಸ್ತ್ರಗ್ರಂಥದಲ್ಲಿ ಬಂದುಹೋದ ಸಂಕೀರ್ಣ ಜಿಜ್ಞಾಸೆಯನ್ನು ಅವ್ಯಾವುದರ ಹೆಸರನ್ನೂ ಹೇಳದೆ ಎಷ್ಟು ಸರಳವಾಗಿ ಮತ್ತು ಆಕರ್ಷಕವಾಗಿ ಇಂದಿನ ಬದುಕಿಗೆ ಥಟ್ಟನೆ ಸಮೀಕರಿಸಿ ಜೋಗಿ ಹೇಳಿಬಿಡುತ್ತಾರೆ’. ಜೋಗಿಯವರ ನಿತ್ಯೋಪನಿಷತ್ತು ಏನುಂಟು ಏನಿಲ್ಲ. ದರ್ಶನಗಳುಂಟು, ಉಪದೇಶವಿಲ್ಲ! ನಮಗಿವತ್ತು ತುರ್ತಾಗಿ ಬೇಕಿರುವುದೇ ಇಂತಹ ದರ್ಶನಗಳು. ಆದರೆ ಪುಸ್ತಕ ಭಂಡಾರದಲ್ಲಿ ಹುಡುಕಿದರೆ ಸಿಗುವುದು ಬೌದ್ಧದರ್ಶನ, ಅರ್ಹತದರ್ಶನ, ಪೂರ್ಣಪ್ರಜ್ಞದರ್ಶನ, ಶೈವದರ್ಶನ, ರಾಮಾನುಜದರ್ಶನ, ಜೈಮಿನಿದರ್ಶನ, ಪಾಣಿನಿದರ್ಶನ, ಶಾಂಕರದರ್ಶನ ಹೀಗೆ ತೂಕದ ಹೆಸರಿನ ಹಳೆಯ ದರ್ಶನಗಳೇ. ಇವುಗಳಿಗೆ ಎಷ್ಟು ನೂರು ವರ್ಷಗಳಾದವೋ. ಜಗತ್ತು ಇವುಗಳಿಂದ ಬಹಳ ಮುಂದೆ ಬಂದುಬಿಟ್ಟಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಮಗೆ ಆಧುನಿಕ ದರ್ಶನಗಳು ಬೇಕು. ಆದರೆ ಅವು ಹಳೆಯದನ್ನು ಮರೆತಿರಬಾರದು. ಜೊತೆಗೆ ಅವು ಆಧುನಿಕ ರೂಪದಲ್ಲೇ ಇರಬೇಕು, ಇಲ್ಲದಿದ್ದರೆ ನಮ್ಮ ತಲೆಗೆ ಹೋಗುವುದಿಲ್ಲ.
ನಿತ್ಯೋಪನಿಷತ್ತು:
ಜೋಗಿ ದಿನಪತ್ರಿಕೆಯೊಂದರಲ್ಲಿ ಪ್ರತಿದಿನವೆಂಬಂತೆ ಬರೆದ ಈ ಪುಟ್ಟ ಪುಟ್ಟ ಬರಹಗಳನ್ನು ಓದಿದಾಗ, ಮನಸ್ಸು ಚಿಂತನೆಯ ನಾವೆಯನ್ನೇರುತ್ತದೆ. ಎರಡು ಪುಟಗಳ ವ್ಯಾಪ್ತಿಯ ಇಲ್ಲಿನ ಬರಹಗಳಿಗೆ ಪ್ರತ್ಯೇಕ ತಲೆಬರಹವಿಲ್ಲ. ಓದುತ್ತಾ ಹೋದಂತೆ, ನಮ್ಮೊಳಗೇ ಈ ಬರಹಗಳು ಇಳಿಯುವ ಪರಿ ವಿಶಿಷ್ಟ 'ಜಗತ್ತಿನಲ್ಲಿ ಎರಡು ಥರದ ವ್ಯಕ್ತಿಗಳು ಸಿಗುತ್ತಾರೆ; ಸ್ಥಿತಿವಂತರು ಮತ್ತು ಗತಿವಂತರು. ಇವರ ಪೈಕಿ ನೀವು ಯಾವ ಬಳಗಕ್ಕೆ ಸೇರುತ್ತಿರಿ ಅಂತ ನೀವೇ ಕಂಡುಕೊಳ್ಳಿ' (ಪುಟ 117) ಈ ರೀತಿ ಆರಂಭವಾಗುವ ಒಂದು ಬರಹ ನೇರ ವಾಗಿ ಓದುಗನ ಮನಸ್ಸನ್ನು ಕ್ರಿಯಾಶೀಲನನ್ನಾಗಿಸುತ್ತದೆ. ತಾವು ಯಾವ ಬಳಗಕ್ಕೆ ಸೇರು ತೇವೆಂದು ನಿರ್ಧರಿಸಿಕೊಂಡೇ ಓದು ಮುಂದುವರಿಸುವ ಅನಿವಾರ್ಯತೆ. ಇನ್ನೊಂದು ಬರಹದ ಆರಂಭ ನೋಡಿ - 'ಮಹಾನಗರಗಳಿಗೆ ಒಂದು ವಿಚಿತ್ರವಾದ ಚಾಳಿ ಇದೆ. ಅದು ಮನುಷ್ಯನನ್ನು ದುಡಿಯಲು ಹಚ್ಚುತ್ತದೆ. ಹೆಚ್ಚು ಹೆಚ್ಚು ದುಡಿಯಲು ಪ್ರೇರೇಪಿ ಸುತ್ತದೆ. ಹೆಚ್ಚು ಹೆಚ್ಚು ದುಡಿಮೆ ಮಾಡಿದವನಿಗೆ ಹೆಚ್ಚು ಹೆಚ್ಚು ದುಡ್ಡು ಕೊಡುತ್ತದೆ. ಹಾಗೆ ಕೊಟ್ಟ ಹೆಚ್ಚುವರಿ ದುಡ್ಡನ್ನು ಅದು ಅತಿ ವಿನಯದಿಂದ ವಾಪಸ್ಸು ತೆಗೆದುಕೊಳ್ಳುತ್ತದೆ.'
- ಶಶಿಧರ ಹಾಲಾಡಿ
ಕೃಪೆ: ಪ್ರಜಾವಾಣಿ, (2020 ಫೆಬ್ರುವರಿ 02)
©2024 Book Brahma Private Limited.