'ಕಾಗೆ ಕಾರುಣ್ಯದ ಕಣ್ಣು’ ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನವಾಗಿದೆ. ನಾನು ಆತ್ಮಕತೆಯನ್ನು ಬರೆಯಬೇಕೆಂಬ ಒತ್ತಾಯವನ್ನು ನನ್ನ ಹಳೆಯ ವಿದ್ಯಾರ್ಥಿಗಳಾದಿಯಾಗಿ ಸ್ನೇಹಿತರು, ಹಿತೈಷಿಗಳು ಮಾಡುತ್ತಲೇ ಇದ್ದರು. ನಾನು ಮನಸ್ಸು ಮಾಡಿರಲಿಲ್ಲ. ಆತ್ಮಕತೆಯೆಂಬುದು ಪೂರ್ಣ ಸತ್ಯದ ಕತೆಯಾಗಿರುತ್ತದೆಯೇ ಎಂಬ ಬಗ್ಗೆ ನನ್ನಲ್ಲಿ ಜಿಜ್ಞಾಸೆಯಿತ್ತು. ಆತ್ಮಕತೆಯ ರಚನಕಾರರು ಸತ್ಯವನ್ನೇ ಹೇಳಿರುತ್ತಾರೆಂದುಕೊಂಡರೂ ತಮ್ಮ ಜೀವನದ ಸಮಸ್ತ ಸತ್ಯಗಳನ್ನೂ ಬರೆದಿರುವುದಿಲ್ಲ. ಓದುಗರೊಂದಿಗೆ ಹಂಚಿಕೊಳ್ಳಬಹುದಾದ ಸಂಗತಿಗಳು ಇರುವಂತೆಯೇ ಹಂಚಿಕೊಳ್ಳಲಾಗದ ಸಂಗತಿಗಳೂ ಇರುತ್ತವೆ. ಯಾರೂ ಎಲ್ಲವನ್ನೂ ಹೇಳಿಕೊಳ್ಳುವುದಿಲ್ಲ ಅಥವಾ ಹೇಳಿಕೊಳ್ಳಲಾಗುವುದಿಲ್ಲ. ಹೀಗಾಗಿ ಆತ್ಮಕತೆಗಳು ಆಯ್ದ ಸತ್ಯದ ಕತೆಗಳಾಗಿರುತ್ತವೆ.
ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಇದು ಸಹಜವೂ ಹೌದು. ಆತ್ಮಕತೆಗಳು ಆಯ್ದ ಸತ್ಯದ ಕತೆಗಳಾದರೆ ತಪ್ಪೇನೂ ಇಲ್ಲ. ಆದರೆ ಅರ್ಧ ಸತ್ಯದ ಕತೆಗಳಾದರೆ ತಪ್ಪು. ಇಷ್ಟಕ್ಕೂ ನಮ್ಮ ಬದುಕಿನ ಸತ್ಯಗಳನ್ನು ಬಹಿರಂಗಪಡಿಸುವುದರಿಂದ ಸಮಾಜಕ್ಕೇನು ಪ್ರಯೋಜನವೆಂಬ ಪ್ರಶ್ನೆಯೂ ನನ್ನಲ್ಲಿತ್ತು. ಅದೇ ಸಂದರ್ಭದಲ್ಲಿ ರವೀಂದ್ರನಾಥ ಟಾಗೋರರ ಆತ್ಮಕತೆಯ ಭಾಗವಾದ 'ನನ್ನ ಬಾಲ್ಯ' ಎಂಬ ಪುಸ್ತಕವನ್ನು ಓದಿ ನಾನು ಸಾಹಿತಿಯಾಗಬೇಕೆಂಬ ಪ್ರೇರಣೆಯನ್ನು ಪಡೆದ ಸತ್ಯವೂ ನನ್ನೊಳಗೆ ಇತ್ತು. ಒಟ್ಟಾರೆ ಆತ್ಮಕತೆ ಬರೆಯುವುದರ ಬಗ್ಗೆ ನನ್ನೊಳಗಿನ ಜಿಜ್ಞಾಸೆ ಜಾಗೃತವಾಗಿಯೇ ಇತ್ತು. - ಬರಗೂರು ರಾಮಚಂದ್ರಪ್ಪ
©2024 Book Brahma Private Limited.