ಆಸ್ಪತ್ರೆ ನೋಡದೇ ಇರುವವರು ಯಾರಿಲ್ಲ. ನಮ್ಮ ಆರೋಗ್ಯದಲ್ಲಿ ಚಿಕ್ಕಪುಟ್ಟ ವ್ಯತಯವಾದರೂ ಆಸ್ಪತ್ರೆಗೆ ಓಡಿ ಹೋಗುತ್ತವೆ. ಹೀಗೆ ಪ್ರತಿದಿನ ಲಕ್ಷಾಂತರ ಜನರು ಆಸ್ಪತ್ರೆ ಮೆಟ್ಟಿಲು ಹತ್ತುವುದು ಸರ್ವೇ ಸಾಮಾನ್ಯ. ನಾಡಿ ಮಿಡಿತದ ದಾರಿ ವೈದ್ಯ ಲೋಕದ ಅನುಭವಗಳ ಕಥನವಾಗಿರುವುದರಿಂದ ನಾನಾ ಬಗೆಯ, ನಾನಾ ವಿಷಯಗಳನ್ನು ತೆರೆದಿಡುವ ಮಹತ್ತರ ಕೃತಿ ಎಂದರೆ ತಪ್ಪಾಗಲಾರದು.
ವೃತ್ತಿಯಲ್ಲಿ ವೈದ್ಯರಾಗಿರುವ ಶಿವಾನಂದ ಕುಬುಸದ ಅವರ ವೈದ್ಯ ಲೋಕದ ಅನುಭವ ಮತ್ತು ಅನುಭಾವಗಳ ಪರಿಚಯ ನಾಡಿ ಮಿಡಿತದ ದಾರಿ. ರೋಗಿಗಳೊಂದಿಗಿನ ಒಡನಾಟ, ಅವರ ಬದುಕು, ಕಷ್ಟಗಳು, ಆರೋಗ್ಯ ಇವೆಲ್ಲದರ ಕುರಿತು ತಾನು ನೋಡಿದ ವಿಷಯಗಳನ್ನು, ಅನುಭವಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ತನ್ನ ಸುತ್ತ ಇರುವವರನ್ನು ಅಗಾಧವಾಗಿ ನಂಬುವುದು, ಪ್ರೀತಿಸುವುದು, ಸಂತೋಷವಾಗಿರುವುದು, ಇಂತಹ ಹಲವಾರು ವಿಷಯಗಳು ಇವರ ಕೃತಿಯಲ್ಲಿ ನೆಲೆಗೊಂಡಿವೆ. ತಂತ್ರಜ್ಞಾನ ಬದಲಾದಂತೆ ತನ್ನ ವೃತ್ತಿಯಲ್ಲಾದ ಬದಲಾವಣೆಗಳ ಕುರಿತು ಲೇಖಕರು ವಿವರಿಸಿದ್ದಾರೆ.
ವೃತ್ತಿ ಸಾರ್ಥಕ್ಯದ ಆ ದಿನ, ಆ ರೋಗಿಯೊಳಗೆ, ಇದ್ದನೊಬ್ಬ ಯೋಗಿ, ಜೀವ ಉಳಿಸಿತು ಅವ್ವನ ನೆನಪು, ಎಂದೂ ಮರೆಯದ ಪಾಠಗಳು, ಮನಸ್ಸನ್ನು ಕಲಕಿತು ಕೈ ಮೇಲಿನ ಆ ಹೆಸರು, ಆಸ್ಪತ್ರೆಯೆಂಬ ಸುರಕ್ಷಾ ತಂಗುದಾಣ, ಕ್ಯಾನ್ಸರ್‌ನೊಡನೆ ಸೆಣೆಸುತ್ತಲೇ ರೋಗಿಗಳ ಸೇವೆ ಮಾಡಿದವಳು, ಅಪ್ಪನೆಂಬ ಹೊರೆ ಇಳಿಸಿದವರು, ಕಥೆ ಬರೆಯುವವನೊಬ್ಬ ಕಥೆಯಾಗಿಬಿಟ್ಟ, ಮಡದಿಯೆಂಬ ಮಹಾಗುರು ಮುಂತಾದ ಹಲವಾರು ಅಧ್ಯಾಯಗಳು ಈ ಕೃತಿಯಲ್ಲಿವೆ. ಇಲ್ಲಿನ ಪ್ರತಿ ಅಧ್ಯಾಯವು ನಮ್ಮ ಕಣ್ಣ ಮುಂದೆ ನಡೆದ ಘಟನೆಗಳು ಎನ್ನಿಸಿದರೂ ತಪ್ಪೇನಿಲ್ಲ.
©2024 Book Brahma Private Limited.