ಕನ್ನಡ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ ಪಿ.ಲಂಕೇಶ್ ಮತ್ತು ಡಿ.ಆರ್. ನಾಗರಾಜ್, ಇಪ್ಪತ್ತನೆಯ ಶತಮಾನದ ಕನ್ನಡದ ಶ್ರೇಷ್ಠ ಚಿಂತಕರು. ಇವರಿಬ್ಬರ ಬಗೆಗೆ ಅಪಾರ ಪ್ರೀತಿಯಿಟ್ಟುಕೊಂಡೇ ಶಿಸ್ತು ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿರುವ, ಇಬ್ಬರೊಂದಿಗೂ ಆಪ್ತವಾಗಿ ಒಡನಾಡಿರುವ ಡಾ. ನಟರಾಜ್ ಹುಳಿಯಾರ್, ‘ಇಂತಿ ನಮಸ್ಕಾರಗಳು’ ಎಂಬ ಕೃತಿಯ ಮೂಲಕ ಈ ಎರಡು ದೈತ್ಯಪ್ರತಿಭೆಗಳನ್ನು ಕನ್ನಡದ ಮನಸ್ಸುಗಳ ಮುಂದಿಟ್ಟಿದ್ದಾರೆ.
‘ಮೇಲುನೋಟಕ್ಕೆ ಭಿನ್ನವಾಗಿ ಕಾಣುವ, ಬೇರೆ ಬೇರೆ ತಲೆಮಾರುಗಳಿಗೆ ಸೇರಿದ ಡಿಆರ್ ಹಾಗೂ ಲಂಕೇಶರನ್ನು ಜೊತೆಗಿಟ್ಟು ನೋಡುವುದು ಸಾಹಿತ್ಯ ವಿಮರ್ಶೆಯ ವಿದ್ಯಾರ್ಥಿಗಳಿಗೆ ಅಸಂಗತವಾಗಿ ಕಾಣಬಹುದು. ಆದರೂ ನಾನು ಅದೃಷ್ಟವಶಾತ್ ಒಡನಾಡಿದ ಕನ್ನಡದ ಎರಡು ದೊಡ್ಡ ಪ್ರತಿಭೆಗಳನ್ನು ಹೊರಳಿ ನೋಡುವ ಹಾಗೂ ನನ್ನಂಥ ಒಬ್ಬ ಓದುಗನೊಳಗೆ, ಬರಹಗಾರನೊಳಗೆ ಇಪ್ಪತ್ತನೆಯ ಶತಮಾನದ ಇಬ್ಬರು ಶ್ರೇಷ್ಠ ಕನ್ನಡ ಲೇಖಕರು ಅಂತರ್‌ಪಠ್ಯೀಯವಾಗಿ ಬೆರೆತುಹೋಗಿರುವ ರೀತಿಯನ್ನು ಗ್ರಹಿಸುವ ನಿರೂಪಣೆಯಿದು’ ಎಂದು ನಟರಾಜ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿರುವುದು, ಇನ್ನಷ್ಟು ಲೇಖಕರಿಗೆ, ಭಿನ್ನ ಮಾದರಿಯ ಬರವಣಿಗೆಗೆ ಪ್ರೇರೇಪಿಸಿದರೂ ಆಶ್ಚರ್ಯವಿಲ್ಲ.
ಲಂಕೇಶ್ ಮತ್ತು ಡಿಆರ್ ಅವರನ್ನು ನಟರಾಜ್, ತಮ್ಮ ಭಾವ ಭಿತ್ತಿಯೊಳಕ್ಕೆ ಇಳಿಸಿಕೊಂಡ ಬಗೆಯನ್ನು ವಿವರಿಸುತ್ತಾ, ‘ನಾನು ಲಂಕೇಶರ ಆಪ್ತವಲಯಕ್ಕೆ ಹೋಗುವ ಮೊದಲೇ ಎಂಬತ್ತರ ದಶಕದ ಕೊನೆಗೆ ಡಿಆರ್ ಜೊತೆಗಿನ ನನ್ನ ಸಂಶೋಧನೆಯ ಒಡನಾಟ ಶುರುವಾಯಿತು. ‘ಲಂಕೇಶ್ ಪತ್ರಿಕೆ’ಯ ಮೂಲಕ ಮಾನವ ವರ್ತನೆ, ಸಮಾಜ, ರಾಜಕಾರಣವನ್ನು ಗ್ರಹಿಸಲು ಕಲಿಯತೊಡಗಿದ್ದ ನನಗೆ ಡಿಆರ್ ವಸಾಹತುವಿರೋಧಿ ಸಿದ್ಧಾಂತಗಳನ್ನು, ನಿರ್ವಸಾಹತೀಕರಣ ಸಿದ್ಧಾಂತಗಳನ್ನು ಮೊದಲ ಬಾರಿಗೆ ಪರಿಚಯಿಸತೊಡಗಿದ್ದರು. ಗಾಂಧೀಜೀ, ಫ್ರಾಂಟ್ಜ್ ಫ್ಯಾನನ್, ಮನೋನ್, ಅಶೀಶ್ ನಂದಿ ಮುಂತಾದ ಚಿಂತಕರ ಬಗ್ಗೆ ಮಾತನಾಡುತ್ತಾ, ವಸಾಹತೀಕರಣ ತೃತೀಯ ಜಗತ್ತಿಗೆ ತಂದ ಚಲನೆ ಹಾಗೂ ಆಘಾತಗಳನ್ನು ವಿವರಿಸುತ್ತಾ, ನಾನು ಆವರೆಗೆ ಕಾಣದ ಬೌದ್ಧಿಕ ಲೋಕವೊಂದನ್ನು ತೆರೆಯತೊಡಗಿದರು. ಆಸೆಯಿಂದ, ಗೊಂದಲದಿಂದ, ಉನ್ನತ ಸಿದ್ಧಾಂತಗಳನ್ನು ಕುರಿತ ಪುಳಕ ಹಾಗೂ ಅವುಗಳ ಎದುರು ಹುಟ್ಟುವ ಅಧೀರತೆಯಿಂದ ಅವನ್ನೆಲ್ಲ ಮುಟ್ಟಲೆತ್ನಿಸಿದೆ. ‘ಲಂಕೇಶ್ ಪತ್ರಿಕೆ’ಯಂತೆಯೇ ಡಿಆರ್ ರೂಪಿಸಿಕೊಡುತ್ತಿದ್ದ ಅಧ್ಯಯನವಿಧಾನ ಕೂಡ ನನ್ನೊಳಗೆ ಮೆಲ್ಲಗೆ ಪ್ರವೇಶಿಸತೊಡಗಿತು’ ಎಂದಿರುವುದು ಅವರ ಸೃಜನಶೀಲ ಮನಸ್ಸು ಅರಳಿದ ಬಗೆಯನ್ನು ಅನಾವರಣಗೊಳಿಸುತ್ತದೆ.
©2025 Book Brahma Private Limited.