ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯ, ಲೇಖಕ ಗುರುಕಿರಣ್ ಎನ್. ಅವರ ವೃತ್ತಿ ಆರಂಭದ ಅನುಭವ ಕಥನ ‘ಶಹರು ಮತ್ತು ಶ್ವೇತಾದ್ರಿ’. ತಮ್ಮ ಆಲೋಪಥಿ ವೈದ್ಯಕೀಯ ಬದುಕಿನ ತರಬೇತಿ ದಿನಗಳಿಂದ ಹಿಡಿದು, ಪ್ರಸ್ತುತ ಬದುಕಿನ ವಿಚಾರಗಳನ್ನು ಇಲ್ಲಿ ಬಿತ್ತರಿಸಿದ್ದಾರೆ. ಆಸ್ಪತ್ರೆಯಲ್ಲಿ ಎದುರಾದ ಹಾಸ್ಯ ಸನ್ನಿವೇಶ, ರೋಗಿಗಳ ಮಾನಸಿಕ ತುಮುಲ, ಕುಟುಂಬದವರ ಸಂಕಷ್ಟ, ಮಾನವನ ಕ್ರೌರ್ಯ, ಹಿಂಸೆ, ಅಸಹಾಯಕತೆ ಹೀಗೆ ಅವರ ಅನುಭವ ಲೋಕದ ವಿಚಾರಗಳೇ ಕೃತಿಯಾಗಿ ಮೈದೆಳೆದಿದೆ. ಬಿಳಿಗಿರಿರಂಗನಬೆಟ್ಟ, ಕಾಡು, ಪ್ರಾಣಿ, ಪಕ್ಷಿ, ಸೋಲಿಗರ ಆಚಾರ-ವಿಚಾರಗಳಿಂದ ಮತ್ತಷ್ಟು ಆಪ್ತವೆನ್ನಿಸುವ ‘ಶಹರು ಮತ್ತು ಶ್ವೇತಾದ್ರಿ’ ಹೋಮಿಯೋಪಥಿ ವೈದ್ಯರಾಗಿದ್ದರೂ ಗಿಡಮೂಲಿಕೆಗಳು, ಆಯುರ್ವೇದ ಚಿಕಿತ್ಸೆಯಲ್ಲಿ ಅವುಗಳ ಬಳಕೆ, ಸೋಲಿಗರ ನಾಟಿ ಚಿಕಿತ್ಸೆಯ ಜ್ಞಾನದ ಕುರಿತು ಪ್ರಸ್ತಾಪಿಸಿರುವುದನ್ನು ಕಾಣಬಹುದು. ಗಿರಿಜನರ ಜೀವನ, ಆಚರಿಸುವ ಹಬ್ಬಗಳು, ಬಿಳಿಗಿರಿರಂಗನಬೆಟ್ಟದ ಸೌಂದರ್ಯ, ದೊಡ್ಡ ಸಂಪಿಗೆ ಸೇರಿದಂತೆ ಬಿಳಿಗಿರಿ ಕಾನನದಲ್ಲಿರುವ ಪ್ರಮುಖ ಸ್ಥಳಗಳು, ಪ್ರಾಣಿಗಳು. ಅವುಗಳಿಂದ ಎದುರಾದ ಅಪಾಯದ ಸನ್ನಿವೇಶಗಳು, ಪಕ್ಷಿಗಳ ಕುರಿತ ವಿಚಾರಗಳನ್ನು ದಾಖಲಿಸುವ ಪಯತ್ನವನ್ನು ಲೇಖಕ ಮಾಡುತ್ತಾರೆ. ಒಟ್ಟಾರೆಯಾಗಿ ಕೃತಿಯು ನಗರ ಹಾಗೂ ಕಾಡಿನಲ್ಲಿ ಪಡೆದ ಅನುಭಗಳ ಗುಚ್ಛವಾಗಿದೆ.
ವೈದ್ಯರೊಬ್ಬರ ಅನುಭವಗಳ ಗುಚ್ಛ(ಪ್ರಜಾವಾಣಿ, 11 ಡಿಸೆಂಬರ್ 2022)
---
©2024 Book Brahma Private Limited.