ಯೋಗೀಂದ್ರ ಮರವಂತೆ ಅವರ ಅನುಭವ ಕಥನ ‘ಮುರಿದ ಸೈಕಲ್, ಹುಲಾ ಹೂಪ್ ಹುಡುಗಿ’. ಈ ಕೃತಿಗೆ ಎಸ್. ದಿವಾಕರ್ ಅವರು ಮುನ್ನುಡಿ ಬರೆದಿದ್ದಾರೆ. ಮುನ್ನುಡಿಯಲ್ಲಿ ‘ಗೆಳೆಯ ಯೋಗೀಂದ್ರ ಮರವಂತೆಯವರ ಈ ಕೃತಿಯಲ್ಲಿ ಕೊರೋನ ಎಂಬ ಭೀಕರ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಲಂಡನ್ನಿನ, ಅಷ್ಟೇಕೆ ಇಡೀ ಯು.ಕೆ.ಯ, ಚಿತ್ರವಿದೆ. ಅವರೇ ಹೇಳಿರುವಂತೆ ಇದು “ಕೋವಿಡ್ ಹೋರಾಟದ ನೆಪದಲ್ಲಿ ಯು.ಕೆ.ಯ, ದೈನಿಕದ ಒಳನೋಟಗಳನ್ನು ತಿಳಿಯುವ, ಖುಲಾಸೆಗೊಳಿಸುವ ಪ್ರಯತ್ನವೂ ಹೌದು.” ಉದ್ಯೋಗ ನಿಮಿತ್ತ ಯುನೈಟೆಡ್ ಕಿಂಗ್ಡಮ್‌ನಲ್ಲಿರುವ ಯೋಗೀಂದ್ರ ಅಲ್ಲಿನ ದೈನಂದಿನ ಜೀವನದ ಪ್ರತ್ಯಕ್ಷದರ್ಶಿಯಾಗಿರುವುದರಿಂದ ಅವರಿಲ್ಲಿ ನಿರೂಪಿಸಿರುವ ವಿದ್ಯಮಾನಗಳು, ಪ್ರಸಂಗಗಳು, ವ್ಯಕ್ತಿವಿಶೇಷಗಳು, ಸಮಾಜದ, ಸರಕಾರದ ಪ್ರಯತ್ನಗಳು, ಇವುಗಳಿಗೆಲ್ಲ ಅಧಿಕೃತತೆಯ ಒಂದು ಮುದ್ರೆ ಬಿದ್ದಂತಾಗಿದೆ. ಬಡವರ ಪರವಾಗಿ ಹೋರಾಡಿ ಜಯಿಸಿದ ಮಾರ್ಕಸ್ ರಾಷ್ಫೊರ್ಡ್ ಎಂಬ ಕ್ರೀಡಾಪಟುವಿನಿಂದ ಹಿಡಿದು ಗಮ್ಯವನ್ನು ತಲಪುವ ಮೊದಲೇ ಬಲಿಯಾಗುವ ವಲಸೆಗಾರರವರೆಗೆ ಇಪ್ಪತ್ತು ಲೇಖನಗಳಲ್ಲಿ ಹರಡಿಕೊಂಡಿರುವ ಕಣ್ಣಿಗೆ ಕಟ್ಟುವಂಥ ಒಂದಿಡೀ ಜಗತ್ತು ಇಲ್ಲಿ ತನ್ನೆಲ್ಲ ಬಣ್ಣ ವಾಸನೆಗಳೊಡನೆ ಓದುಗರನ್ನು ಆವರಿಸಿಕೊಳ್ಳುತ್ತದೆ’ ಎಂಬುದಾಗಿ ಹೇಳಿದ್ದಾರೆ.
ಲೇಖಕ ಮಾತಿನಂತೆ, ’ ಈ ಲೇಖನಗಳು, ಅಧಿಕೃತ ದಾಖಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಕಾಣಿಸಿಕೊಂಡ 2020ರ ಏಪ್ರಿಲ್ ತಿಂಗಳಿನಿಂದ ,ಬ್ರಿಟನ್ನಿನಲ್ಲಿ ಎರಡನೆಯ ಅಲೆ ಮುಕ್ತಾಯವಾಗಿ ಜನಜೀವನ ಮಾಮೂಲಿ ಸ್ಥಿತಿಯತ್ತ ಹೊರಳುವ ಸೂಚನೆ ಕಾಣಿಸುವ 2021ರ ಜೂನ್ ತನಕದ ಕಾಲಘಟ್ಟದಲ್ಲಿ ಬರೆದವು. ಬ್ರಿಟನ್ನಿನಲ್ಲಿ ಸದ್ಯದ ಸ್ಥಿತಿ ಸುಧಾರಿಸಿದ್ದರೂ ಜಗತ್ತಿನ ಬೇರೆ ಕಡೆಗಳಲ್ಲಿ ಕೋವಿಡ್ ಇನ್ನೂ ಜಾರಿಯಲ್ಲಿದೆ. ಇಡೀ ಜಗತ್ತು ಕೋವಿಡ್ ಇಂದ ಮುಕ್ತ ಆಗುವವರೆಗೂ ಎದಿರಿಸುವಿಕೆ ಮುಂದುವರಿಯಲಿದೆ, ಒಂದು ವೇಳೆ ಎಂದೋ ಒಂದು ದಿನ ಈ ಬಿಕ್ಕಟ್ಟಿನಿಂದ ಬಿಡುಗಡೆ ದೊರೆತರೂ ಗಾಢ ಪರಿಣಾಮಗಳಂತೂ ಇಲ್ಲೇ ಉಳಿಯಲಿವೆ. ಮನುಷ್ಯರ ಬದುಕನ್ನು ಇನ್ನಷ್ಟು ಮತ್ತಷ್ಟು ಸುಖಿಯಾಗಿಡಬೇಕು ಎನ್ನುವ ಕನಸಿನಲ್ಲಿ ಕಟ್ಟಿದ ಇಂದಿನ ಮಾದರಿಯ ಜಗತ್ತಿನಲ್ಲಿ ಅರೋಗ್ಯ,ಜೀವ ಜೀವನಗಳಂತಹ ಮೂಲಭೂತ ವಿಷಯಗಳು ಜಾಗತೀಕರಣ,ಆರ್ಥಿಕತೆ ,ಅಧಿಕಾರ ಎನ್ನುವ ಪಾರಿಭಾಷಿಕಗಳ ಇದಿರಿನಲ್ಲಿ ತುಲನೆ ಪಂಥ ಆಯ್ಕೆಗೆ ಒಳಗಾಗುತ್ತಿವೆ. "ಮುರಿದ ಸೈಕಲ್" ಎನ್ನುವ ಕಾಲವನ್ನು ಮತ್ತು ಆ ಕಾಲವನ್ನು ಎದುರಿಸುವಲ್ಲಿ "ಹುಲಾ ಹೂಪ್ ಹುಡುಗಿ" ಮಾಡಿಕೊಂಡ ಆಯ್ಕೆಯನ್ನು ಮತ್ತೆ ಮತ್ತೆ ಬಿಡಿಸಿ ಅಳಿಸುತ್ತಿವೆ’ ಎಂದಿದ್ದಾರೆ.
ಯೋಗೀಂದ್ರ ಮರವಂತೆ ಅವರ 'ಮುರಿದ ಸೈಕಲ್ ಹೂಲಾ ಹೂಪ್ ಹುಡುಗಿ' ಕೃತಿಯ ಕುರಿತು ಮಾತು.
©2024 Book Brahma Private Limited.