ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಕೊಡುವುದು ಭಾರತದಲ್ಲಿ ಜಾರಿಯಾಗು ದಶಕವೇ ಕಳೆದಿದೆ. ಈ ಪದ್ಧತಿ ಜಾರಿಗೆ ಬಂದದ್ದು ಹೇಗೆ? ಸರ್ಕಾರಗಳಿಗೆ ಈ ಪದ್ದತಿಯ ಬಗ್ಗೆ ಆಲೋಚನೆ ಹುಟ್ಟಿದ್ದು ಹೇಗೆ ಎಂಬುದನ್ನು ಕೆಣಕುತ್ತಾ ಹೋದಂತೆ ಬಿಸಿಯೂಟ ಪರಿಕಲ್ಪನೆಯ ಹರಿಕಾರಳು ಎಗ್ಲಾಂಟೈನ್ ಜೆಬ್ ಎಂಬುದು ತಿಳಿದುಬರುತ್ತದೆ. 52 ವರ್ಷಗಳ ತನ್ನ ಜೀವಿತಾವಧಿಯಲ್ಲಿ ಇಡೀ ಜಗತ್ತಿಗೆ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದ ಮತ್ತು ಆ ನಿಟ್ಟಿನಲ್ಲಿ ಜಗತ್ತು ಸಾಂಸ್ಥಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಪ್ರೇರೇಪಿಸಿದ ಜೆಬ್ ಅವರ ಬಗ್ಗೆ ಈ ಕೃತಿಯಲ್ಲಿ ತಿಳಿಯಬಹುದು. ”ಆಕೆ ಮಕ್ಕಳನ್ನು ರಕ್ಷಿಸಿದಳು: ಎಗ್ಲಾಂಟೈನ್ ಜೆಬ್ ಕಥನ’ ಜೆಬ್ ಅವರ ಬದುಕಿನ ಕುರಿತು ಸಂಪೂರ್ಣ ಮಾಹಿತಿ ನೀಡುವುದರೊಂದಿಗೆ, ಮಕ್ಕಳ ಹಕ್ಕುಗಳ ಕುರಿತ ಚಿಂತನೆಯ ವಿಕಾಸದ ಕತೆಯನ್ನು ವಿವರಿಸಿದ್ದಾರೆ.
ಬಿಸಿಯೂಟದ ಕಲ್ಪನೆ ಕೊಟ್ಟ ಎಗ್ಲಾಂಟೈನ್‌ಳ ಬದುಕು, ಹೋರಾಟದ ಕಥನ
ಗ್ಲಾಂಟೈನ್ ಜೆಬ್ ಹೆಸರು ನಮಗೆಲ್ಲ ಅಷ್ಟುಪರಿಚಿತವಲ್ಲ ಆದರೆ ಶಾಲೆಯಲ್ಲಿ ಸಿಗುವ ಬಿಸಿಯೂಟ ನಮಗೆ ಗೊತ್ತು. ಈ ಬಿಸಿಯೂಟದ ಕಲ್ಪನೆ ಎಗ್ಲಾಂಟೈನ್ ಎಂಬ ಬ್ರಿಟಿಷ್ ಹೆಣ್ಮಗಳದ್ದು. ಇಂಥಾ ಅದ್ಭುತ ಕಲ್ಪನೆಗಳಿದ್ದೂ, ಮಕ್ಕಳ ಉಳಿವಿಗಾಗಿ, ಬೆಳೆವಿಗಾಗಿ ನಿರಂತರ ಶ್ರಮಿಸಿದ ಈ ಹೆಣ್ಣಗಳ ಬಗ್ಗೆ ಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ. ಈಕೆ ಹೆಣ್ಣು ಅನ್ನುವುದೂ ಸೇರಿದಂತೆ ಅನೇಕ ಕಾರಣಕ್ಕೆ ಈಕೆಯ ಹೆಸರು ಮುನ್ನೆಲೆಗೆ ಬರಲಿಲ್ಲ ಎಂಬ ಮಾತು ಈಗ ಕೇಳಿಬರುತ್ತಿದೆ. ಜರ್ಮನಿ, ಆಸ್ತಿಯಾದ ಲಕಾಡರ ಮಕ್ಕಳ ಹಸಿವು, ಸಾವಿಗೆ ಕಾರಣವಾದ ಇಂಗ್ಲೆಂಡ್‌ನ ಆರ್ಥಿಕ ದಿಗ್ಭಂನದ ವಿರುದ್ಧ ಮೊದಲು ದನಿಯೆತ್ತಿದ ಮಹಿಳೆ ಈಕೆ. ಆಕೆ ಕೊನೆಯವರೆಗೂ ಹೋರಾಡಿದ್ದು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ, ಈ ಕೃತಿಯಲ್ಲಿ ಆಕೆಯ ಹೋರಾಟದ ವಿವರಗಳಿವೆ. ಜೊತೆಗೆ ಆಕೆಯ ವೈಯುಕ್ತಿಕ ಬದುಕಿನ ಕಥನವಿದೆ. ಇಂಥಾ ವಿಷಯದ ಮೇಲೆ ಬರುವ ಕೃತಿಗಳು ವಿಚಾರಪೂರ್ಣವಾಗಿರುತ್ತವೆ, ಆದರೆ ಓದಿಸಿಕೊಂಡು ಹೋಗುವ ಗುಣ ಹೊಂದಿರುವುದಿಲ್ಲ ಎಂಬ ಮಾತಿದೆ. ಅದಕ್ಕೆ ಅಪವಾದ ಈ ಕೃತಿ. ದೊಡ್ಡವರ ಜೊತೆಗೆ ಮಕ್ಕಳೂ ಈ ಪುಸ್ತಕ ಓದಬಹುದು, ಇಂಟೆರೆಸ್ಟಿಂಗ್ ಆಗಿ ಓದಿಕೊಂಡು ಹೋಗುತ್ತದೆ. ಜೊತೆಗೆ ಎಗ್ಲಾಂಟೈನ್‌ನಂಥಾ ನಾವೆಲ್ಲರೂ ತಿಳಿಯಲೇ ಬೇಕಾದ ಹಣ್ಮಗಳ ಕುರಿತು ತಿಳುವಳಿಕೆ ನೀಡುತ್ತೆ. ಈ ಕೃತಿಯ ಆರಂಭ ಹೀಗಿದೆ;
’1919ರ ಏಪ್ರಿಲ್‌ನ ಒಂದುಬೆಳಗು. ಹಿಂದಿನ ರಾತ್ರಿ ಮಳೆ ಸುರಿದಿತ್ತು. ತಣ್ಣಗೆ ಗಾಳಿ ಸುಳಿಯುತ್ತಿತ್ತು. ಲಂಡನ್ ನಗರದ ಕೇಂದ್ರ ಭಾಗದಲ್ಲಿರುವ ವೆಸ್ಟ್ ಮಿನಿಸ್ಟರ್‌ನಲ್ಲಿರುವ ಟ್ರಫಾಲ್ಗರ್ ಚೌಕದಲ್ಲಿ ಬೆಳಕು ಮೂಡಿ ಒಂದಷ್ಟು ಜನ ಅತ್ತ ಹೆಜ್ಜೆ ಹಾಕುತ್ತಿದ್ದರು. ಅಷ್ಟು ಹೊತ್ತಿಗೆ ಇಬ್ಬರು ಮಹಿಳೆಯರು ನಿಧಾನವಾಗಿ ನಡೆದು ಚೊಕದತ್ತ ಬಂದು ನಿಂತರು. ಅವರು ಧರಿಸಿದ್ದ ನವಿರಾದ ಟೊಪ್ಪಿಗೆ ಬೆಚ್ಚನೆಯ ಉಡುಪು, ಕೈ ಚೀಲ, ಕೊಡ, ಪಾದರಕ್ಷೆಗಳೆಲ್ಲವೂ ಅವರು ಸಾಕಷ್ಟು ಸ್ಥಿತಿವಂತರು ಎಂಬುದನ್ನು ತೋರಿಸುತ್ತಿದ್ದವು. ಒಂದಿಷ್ಟು ಕಾಲ ಇಬ್ಬರೂ ಮೆಲುದನಿಯಲ್ಲಿ ಮಾತಾಡಿಕೊಂಡರು. ಕೈಯಲ್ಲಿದ್ದ ಕರಪತ್ರಗಳನ್ನು ಪಾದಾಚಾರಿ ಮಾರ್ಗದಲ್ಲಿ ಕಂಬಗಳಿಗೆ ಒರಗಿಟ್ಟರು’.
ಕೃಪೆ : ಕನ್ನಡ ಪ್ರಭ (2019 ಡಿಸೆಂಬರ್ 22)
...............................................................................................................................................................................................................
ಮಕ್ಕಳ ಹಕ್ಕುಗಳ ಸಂವೇದನೆ
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮತ್ತು ಮಕ್ಕಳಿಗಾಗುತ್ತಿರುವ ಅನ್ಯಾಯಗಳ ವಿರುದ್ಧ ಸದಾ ಚಿಂತಿಸುವ ಎನ್ ವಿ ವಾಸುದೇವ ಶರ್ಮಾ, ಸಮಾಜಕಾರ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ‘ಚೈಲ್ಡ್ ರೈಟ್ ಟ್ರಸ್ಟ್’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾಗಿದ್ದು, ರಾಜ್ಯದ ಉದ್ದಗಲಕ್ಕೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಓಡಾಡುತ್ತಿರುವವರು. ಬ್ರಿಟನ್ನಿನ ಸಾಮಾಜಿಕ ಕಾರ್ಯಕರ್ತೆ, ಎಗ್ಲಾಂಟೈನ್ ಜೆಬ್ ಮಕ್ಕಳ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಮತ್ತು ಅದರಲ್ಲಿ ಪಡೆದ ಅಪೂರ್ವ ಯಶಸ್ಸನ್ನು ಕುರಿತು ವಾಸುದೇವ ಶರ್ಮಾ ಬರೆದಿರುವ ಈ ಪುಸ್ತಕ ಇತಿಹಾಸದ ಅಪರೂಪದ ಅಧ್ಯಾಯವೊಂದನ್ನು ನಮ್ಮ ಮುಂದೆ ತೆರೆದಿಟ್ಟಂತೆಯೇ, ಮಕ್ಕಳ ಹಕ್ಕುಗಳ ಕುರಿತ ಅಪೂರ್ವ ಕಾನೂನು ತಿಳುವಳಿಕೆಯನ್ನೂ ನೀಡುತ್ತದೆ. ಒಟ್ಟು 30 ಪುಟ್ಟ ಪುಟ್ಟ ಅಧ್ಯಾಯಗಳುಳ್ಳ ಈ ಕೃತಿ, ಸರಳ ಭಾಷೆ ಮತ್ತು ಸಣ್ಣ ವಾಕ್ಯಗಳಿಂದಾಗಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಕಾನೂನು ವಿವರಗಳ ಶುಷ್ಕ ಬರವಣಿಗೆಯಾಗುವ ಅಪಾಯದಿಂದ ತಪ್ಪಿಸಿಕೊಂಡು, ಇದನ್ನೊಂದು ಸೃಜನಾತ್ಮಕ ಕೃತಿಯೆಂಬಂತೆ ರೂಪಿಸಿರುವುದು ಶರ್ಮಾರ ಹೆಗ್ಗಳಿಕೆ.
ಲಂಡನ್ನಿನ ಟ್ರಫಾಲ್ಗರ್ ಚೌಕದಲ್ಲಿ ರಾತ್ರಿ ಸುರಿದ ಮಳೆಯ ನೆನಪಿನಲ್ಲಿ ತಂಗಾಳಿ ಸುಳಿಯುತ್ತಿರುವ ಒಂದು ಬೆಳಿಗ್ಗೆ ಎಗ್ಲಾಂಟೈನ್ ಜೆಬ್ ಕರಪತ್ರ ಚಳವಳಿ ನಡೆಸಿ ಪೊಲೀಸರ ಬಂಧನಕ್ಕೆ ಒಳಗಾಗುವ ಘಟನೆಯೊಂದಿಗೆ ಮೊದಲ ಅಧ್ಯಾಯ ಆರಂಭವಾಗುತ್ತದೆ. ಆ ದಿಟ್ಟ ಮಹಿಳೆಯ ಹೋರಾಟದ ಹಾದಿಯನ್ನು ನಾಟಕೀಯವಾಗಿ ವರ್ಣಿಸುತ್ತಾ, ನಡುನಡುವೆ ಮಕ್ಕಳ ಹಕ್ಕುಗಳ ಕಾನೂನಿನ ಕುರಿತು ಪುಟ್ಟ ಟಿಪ್ಪಣಿಗಳನ್ನು ಒದಗಿಸುತ್ತಾ ಸಾಗುವ ಈ ಕೃತಿ, ಮಕ್ಕಳ ಕುರಿತು ಕಳಕಳಿ ಇರುವ ಹಿರಿಯರು ಮಾತ್ರವಲ್ಲ, ಮಕ್ಕಳೂ ಓದಿ ಸುಲಭದಲ್ಲಿ ಅರ್ಥೈಸಿಕೊಳ್ಳುವಂತಿದೆ.
ಟ್ರಫಾಲ್ಗರ್ ಚೌಕದಲ್ಲಿ ಕರಪತ್ರ ಹಂಚಿದ್ದಕ್ಕೆ ಗೆಳತಿ ಬಾರ್ಬರಾ ಜೊತೆಗೆ ದೇಶದ್ರೋಹದ ಆರೋಪ ಎದುರಿಸಿ ನ್ಯಾಯಾಧೀಶರ ಮುಂದೆ ವಿಚಾರಣೆ ಎದುರಿಸುತ್ತಾರೆ ಜೆಬ್. ಮಹಿಳೆಯೆಂಬ ವಿನಾಯ್ತಿ ತೋರಿ ದಂಡ ವಿಧಿಸುತ್ತಾರೆ ವಿಚಾರಣೆ ನಡೆಸಿದ ಸರ್. ಆರ್ಚಿಬಾಲ್ಡ್ ಬೋರ್ಕಿನ್. ಜೆಬ್ ಅವರ ಕೈಯಿಂದಲೇ ಮೊದಲ ದೇಣಿಗೆ ಪಡೆದು ಆರಂಭಿಸಿದ್ದು ‘ಸೇವ್ ದಿ ಚಿಲ್ಡ್ರನ್’ ಎಂಬ ಸಂಸ್ಥೆ! ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 30 ವರ್ಷ ತುಂಬಿರುವ ಮತ್ತು ಎಗ್ಲಾಂಟೈನ್ ಜೆಬ್ ಆರಂಭಿಸಿದ ‘ಸೇವ್ ದಿ ಚಿಲ್ಡ್ರನ್’ ಸಂಸ್ಥೆಗೆ 100 ವರ್ಷಗಳಾಗಿರುವ ಹೊತ್ತಲ್ಲಿ ಸಕಾಲಿಕವಾಗಿ ಈ ಕೃತಿ ಹೊರಬಂದಿದೆ.
ಆಕರ್ಷಕ ಮುದ್ರಣ ವಿನ್ಯಾಸ ಮತ್ತು ರೇಖಾಚಿತ್ರಗಳ ಸಹಿತ ವಿವರಣೆ ಪುಸ್ತಕದ ಓದನ್ನು ಆಪ್ತವಾಗಿಸುತ್ತದೆ. ಮುಖಪುಟದ ಬಾಲಕಾರ್ಮಿಕ ಬವಣೆಯ ಚಿತ್ರವನ್ನು ಬ್ಲರ್ ಆಗಿಸಿ, ‘ಕ್ಷಮಿಸಿ, ಈ ಚಿತ್ರ ಮನಸ್ಸು ಕಲಕುತ್ತದೆ, ಹಾಗಾಗಿ ಇಲ್ಲಿ ಕೃತಿಯ ಯಾವ ವಿವರವನ್ನೂ ನೀಡಿಲ್ಲ’ ಎಂದು ಮುದ್ರಿಸಿರುವುದು, ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಎಷ್ಟೊಂದು ಸೂಕ್ಷ್ಮ ಎಂದು ತಿಳಿಹೇಳುವಂತಿದೆ. ಮಕ್ಕಳ ಕುರಿತು ಕಳಕಳಿಯುಳ್ಳ ಪ್ರತಿಯೊಬ್ಬರೂ ಜೊತೆಗೆ ಇಟ್ಟುಕೊಳ್ಳಬೇಕಾದ ಕೃತಿ ಇದು.
ಕೃಪೆ : ಪ್ರಜಾವಾಣಿ (2020 ಫೆಬ್ರುವರಿ 16)
©2024 Book Brahma Private Limited.