ಈ ಪುಸ್ತಕವು ವಿಚ್ ಅಲ್‍ಬೊಮ್ ಅವರ ಫಾರ್ ಒನ್ ಲಾಸ್ಟ್ ಟೈಮ್ ಕೃತಿಯನ್ನು ಹೋಲುತ್ತದೆ. ಆದರೆ ಆ ಪುಸ್ತಕದ ಕನ್ನಡ ಅನುವಾದವಲ್ಲ. ಈ ಪುಸ್ತಕದಲ್ಲಿ ಬೆಳಗೆರೆಯವರು ಬಳ್ಳಾರಿಯಲ್ಲಿ ತಮ್ಮ ತಾಯಿಯೊಂದಿಗೆ ಕಳೆದ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ಅವರ ಯಶಸ್ಸಿಗೆ ಕಾರಣರಾದ ಅವರ ತಾಯಿಯನ್ನು ತಾವು ಯಶಸ್ಸಿನ ಉತ್ತುಂಗದಲ್ಲಿದ್ದಾಗ ನೋಡುವ ಭಾಗ್ಯ ತನಗಿಲ್ಲವಲ್ಲ ಎಂಬ ನೋವು ಈ ಪುಸ್ತಕದಲ್ಲಿ ಕಾಣುತ್ತದೆ. ಇದರೊಂದಿಗೆ ಚಟಗಳು ಮನುಷ್ಯನಿಗೆ ಯಾವ ರೀತಿ ಅಪಾಯಕಾರಿಯಾಗಿ ಪರಿಣಮಿಸುತ್ತವೆ ಎಂಬ ಕುರಿತಾದ ಸ್ವ-ಅನುಭವಗಳನ್ನು ಈ ಪುಸ್ತಕದಲ್ಲಿ ಲೇಖಕರು ದಾಖಲಿಸಿದ್ದಾರೆ. ಲೇಖಕರ ತಾಯಿಯೊಂದಿಗಿನ ಅಪರೂಪದ ಚಿತ್ರಗಳು ಲೇಖಕರ ಬಾಲ್ಯದ ಕುರಿತು ಮತ್ತಷ್ಟು ಆಳವಾದ ವಿಷಯಗಳನ್ನು ಬಿಚ್ಚಿಡುತ್ತವೆ. ಬಾಲ್ಯದಲ್ಲಿ ತಮ್ಮ ತಾಯಿಯೊಂದಿಗೆ ಕಳೆದ ಕ್ಷಣಗಳನ್ನು ಲೇಖಕರು ರಸವತ್ತಾಗಿ ವಿವರಿಸಿದ್ದಾರೆ. ತಮ್ಮ ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಬರೆದಂತಹ ಈ ಕೃತಿ ಪ್ರತಿಯೊಬ್ಬರ ಬದುಕಿನಲ್ಲಿ ತಾಯಿಯ ಪ್ರಾಮುಖ್ಯತೆ ಏನೆಂಬುದನ್ನು ತೋರಿಸಿಕೊಡುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕರು ಹೇಳಿರುವಂತೆ ಒಂದು ದಿನ ತಾಯಿಯೊಂದಿಗೆ ಕಳೆದರೆ ಈ ಪುಸ್ತಕದ ಪ್ರಾಮುಖ್ಯತೆ ಏನೆಂಬುದು ತಿಳಿಯುತ್ತದೆ.
©2024 Book Brahma Private Limited.