‘ಯಾನ’ ( ಅಲೆಮಾರಿಯ ಅನುಭವ ಕಥನ ) ಕೃತಿಯು ಗಂಗಾಧರ ಕೊಳಗಿ ಅವರ ಅನುಭವ ಕಥನವಾಗಿದೆ. ಕೃತಿಯ ಕುರಿತು ಸುಬ್ರಾಯ ಮತ್ತೀಹಳ್ಳಿ ಅವರು, ಬೆಳಗಾವಿಯಿಂದ ಪ್ರಾರಂಭಿಸಿ ಮೈಸೂರಿನವರೆಗೆ ಸುಮಾರು ಒಂದೂವರೆ ಸಾವಿರ ಕಿ.ಮೀ.ದೂರದ ಸೈಕಲ್ ಪ್ರವಾಸದ ರೋಚಕ ವಿವರಗಳು, ಮೊದಲನೆಯ ಸುದೀರ್ಘ ಲೇಖನದಲ್ಲಿ ಬಿಚ್ಚಿಕೊಂಡರೆ, ಶರಾವತಿ ನದಿಗೆ ನಿರ್ಮಿಸಿದ ಲಿಂಗನಮಕ್ಕಿ ಜಲವಿದ್ಯುತ್ ಆಣೆಕಟ್ಟಿನಿಂದ ನದಿಯ ಹಿನ್ನೀರಿನಲ್ಲಿ, ಪುಟ್ಟ ದೋಣಿಯ ಮೇಲೆ, ಕುಳಿತು, ಹೊಸನಗರದವರೆಗಿನ ಮೂರು ರಾತ್ರಿ ಮೂರು ಹಗಲುಗಳ ಜಲಯಾನದ ಮೈ ಜುಮ್ಮುಗಟ್ಟಿಸುವ ವರ್ಣನೆ ಎರಡನೆಯ ಲೇಖನದಲ್ಲಿ ಮೂಡಿದೆ. ಎರಡನೆಯ ಲೇಖನ ಜಲಯಾನಕ್ಕೆ ಸಂಬಂಧಿಸಿದ್ದು. ಶರಾವತಿ ಹಿನ್ನೀರ ಪಯಣ. ಅದೂ ಸಹ ಸ್ವಾಮಿಯವರದೇ ಕಲ್ಪನೆಯ ಕೂಸು. ಕೃತಿಯಲ್ಲಿ ಅತ್ಯಂತ ಮನಮೋಹಕವಾಗಿ, ನೀರಪ್ರಪಂಚವನ್ನು ಅನಾವರಣಗೊಳಿಸಿದ ಲೇಖನವಿದು. ಸರಳ ಸುಭಗ ಶೈಲಿ, ಸುತ್ತಲಿನ ಪ್ರಕೃತಿ ವರ್ಣನೆ, ಪುಟ್ಟ ದೋಣಿಯಲ್ಲಿ, ಪ್ರವಾಹದ ವಿರುದ್ದ ಹುಟ್ಟುಹಾಕುತ್ತ ಸಾಗುವಾಗಿನ ಸಮಸ್ಯೆ, ಹಗಲಿನ ಬಿಸಿಲುರಿ, ರಾತ್ರಿ ಚಳಿಯ ಕಚಗುಳಿಯಲ್ಲಿಯೂ, ನೀರಮೇಲಣ ಕ್ಷಣಗಳ ರೋಚಕತೆಗಳು ಓದುಗರನ್ನು ಇಂಥ ಸಾಹಸಕ್ಕೆ ಆಹ್ವಾನಿಸುತ್ತದೆ. ಜಲಯಾನದ ಕನಸು ಚಿಗುರಿದ್ದೂ ತಮ್ಮ ವಿಶೇಷ ಗ್ರಂಥಾಧ್ಯಯನದಿಂದ ಎನ್ನುತ್ತ, ಅದರ ಮೂಲವನ್ನು ಪ್ರಸ್ತಾಪಿಸುತ್ತಾರೆ.
ಕೃತಿಯ ಬೆನ್ನುಡಿಯಲ್ಲಿ ಲಿಖಿತಗೊಂಡ ಮಾತುಗಳು ಅರ್ಥಪೂರ್ಣವಾಗಿವೆ. ʻʻ ಈ ಕಥನದ ಪ್ರವಾಸ ಅಥವಾ ಅಲೆದಾಟವೂ ಭಿನ್ನವಾದದ್ದೇ. ಆರಾಮವಾಗಿ, ಮೊದಲ ಹೆಜ್ಜೆಯಲ್ಲೇ ಕೊನೆಯ ನೋಟದಲ್ಲಿ ಇಂಥದ್ದೇ ಸಿಗುತ್ತದೆ ಎನ್ನುವ ಪೂರ್ವನಿಶ್ಚಯದ ಸಿದ್ಧ ಮಾದರಿಯದ್ದಲ್ಲ. ಪ್ರತೀ ಹೆಜ್ಜೆಯಲ್ಲೂ ಅಪಾಯ ಎದುರಾಗಬಹುದಾದ ಸಾಧ್ಯತೆಯಿದ್ದರೂ ಹೊಸದನ್ನು ಹುಡುಕುವ ಕಾಣುವ ಕುತೂಹಲದ್ದು. ಯಾನದ ಅಂತ್ಯದಲ್ಲಿ ಏನು ದಕ್ಕುತ್ತದೆ ಎನ್ನುವುದೇ ನಿಗೂಢವಾಗಿರುವ ಈ ಅನುಭವ ಕಥನ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಶೋಧನೆಯಂತೇ ಭಾಸವಾಗುತ್ತದೆ.ʼʼ ಎಂದಿದೆ.
©2024 Book Brahma Private Limited.