ಜೆಹಾದಿ ಜಗತ್ತಿನ ಕರಾಳ ಮುಖಗಳನ್ನು ಅನಾವರಣಗೊಳಿಸುವ ಕೃತಿ ನೀನಾ ಪಾಕಿಸ್ತಾನ? ಸ್ವಾತಂತ್ರ್ಯ ನಂತರ ಭಾರತದಿಂದ ವಿಭಜನೆಯಾದ ಪಾಕಿಸ್ತಾನ ಭಯೋತ್ಪಾದನೆಯಲ್ಲಿ ಮಾಡಿದ ‘ಸಾಧನೆ’ಯನ್ನು ಈ ಪುಸ್ತಕದಲ್ಲಿ ವಿವರವಾಗಿ ತಿಳಿಸುತ್ತಾರೆ ಲೇಖಕರಾದ ರವಿ ಬೆಳಗೆರೆ. ಏನೂ ಬೆಳೆಯಲಾಗದೇ, ಭಯೋತ್ಪಾದನೆಯನ್ನೇ ತನ್ನ ಪ್ರಮುಖ ಕೃಷಿಯಾಗಿಸಿದ ಪಾಕಿಸ್ತಾನದ ಅವಸ್ಥೆಯ ಅವಲೋಕನ ಈ ಪುಸ್ತಕ. ಜೆಹಾದ್ ಎಂಬ ಅಸ್ತ್ರದಿಂದ ಭಾರತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಪಾಕಿಸ್ತಾನದ ಕರಾಳ ಕೃತ್ಯಗಳ ಕುರಿತು ಈ ಪುಸ್ತಕದಲ್ಲಿ ವಿವರಣೆಯನ್ನು ನೀಡಲಾಗಿದೆ. ಕೇವಲ ಪಾಕಿಸ್ತಾನದ ಹುನ್ನಾರವನ್ನಷ್ಟೇ ಅಲ್ಲದೇ, ಅಲ್ಲಿ ಹುಟ್ಟಿ ಬೆಳೆದಂತಹ ಉಗ್ರ ಸಂಘಟನೆಗಳ ಕುರಿತು ಸಮಗ್ರವಾದ ಮಾಹಿತಿಯನ್ನು ಈ ಪುಸ್ತಕ ನೀಡುತ್ತದೆ. ಲಷ್ಕರ್, ಅಲ್‍ಖೈದಾ, ಮುಜಾಹಿದಿನ್, ತಾಲಿಬಾನ್ ಹೀಗೆ ಹಲವು ಉಗ್ರ ಸಂಘಟನೆಗಳ ಹುಟ್ಟು ಮತ್ತು ಕಾರ್ಯ ನಿರ್ವಹಣಾ ಕ್ರಮಗಳ ಕುರಿತು ಸವಿಸ್ತಾರವಾಗಿ ವಿವರಿಸಲಾಗಿದೆ. ಜಗತ್ತಿನಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಹೇಗೆ ಈ ಸಂಘಟನೆಗಳು ಯೋಜನೆಯನ್ನು ರೂಪಿಸುತ್ತವೆ ಮತ್ತು ಅವುಗಳಿಗೆ ಯುವ ತರುಣರನ್ನು ಸಿದ್ಧಗೊಳಿಸುತ್ತವೆ ಎಂಬುದರ ಕುರಿತು ಈ ಪುಸ್ತಕದಲ್ಲಿ ನಮೂದಿಸಲಾಗಿದೆ.
©2024 Book Brahma Private Limited.