ಲೇಖಕ ಉಲಿವಾಲ ಮೋಹನ್ ಕುಮಾರ್ ಅವರ ’ಮುಳುಗಿದ್ದೆಲ್ಲಾ ಕತೆಯಲ್ಲ’ ಕೃತಿಯು ಅನುಭವ ಕಥನವಾಗಿದೆ. ಇಲ್ಲಿ ಮುಳುಗಡೆಯ ವಸ್ತುವನ್ನೇ ಲೇಖಕ ಕೇಂದ್ರಬಿಂದುವಾಗಿಸಿಕೊಂಡಿದ್ದು, ಈ ಕೃತಿಯು ಅಣೆಕಟ್ಟಿಗೆ ಸಿಕ್ಕಿದ ಊರಿನ ಕತೆಯಾಗಿಯೇ ಹೊರಹೊಮ್ಮಿದೆ.
ಕೃತಿಗೆ ಬೆನ್ನುಡಿ ಬರೆದಿರುವ ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ‘ಪುಟ್ಟ ಹಳ್ಳಿಯಾದ ಗೊರೂರಿನ ಬಳಿಯಲಿದ್ದ ಹೇಮಾವತಿ ನದಿಗೆ ಅಣೆಕಟ್ಟು ನಿರ್ಮಾಣವಾದಾಗ ಉಲಿವಾಲ ಎಂಬ ಗ್ರಾಮವೂ ಮುಳುಗಡೆಯಾಗುತ್ತದೆ. ಆ ವಿಚಾರ ಕುರಿತ ನೆನಪುಗಳ ಕೃತಿ ಇದು. ಮುಳುಗಡೆ ಸಂತ್ರಸ್ತ ಕುಟುಂಬದ ಬಾಲಕನಾಗಿದ್ದ ಲೇಖಕರು, ಮುಳುಗಡೆ ಕಾಲದ ತಮ್ಮ ಬಾಲ್ಯದ ನೆನಪುಗಳನ್ನು ಇಲ್ಲಿ ಮೆಲುಕು ಹಾಕುತ್ತಾ ನಿರೂಪಿಸಿಕೊಂಡು ಹೋಗಿದ್ದಾರೆ. ಹಳ್ಳಿಯ ಮುಳುಗಡೆ ಹಾಗೂ ಸ್ಥಳಾಂತರದ ಕಾಲದ ನೋವನ್ನಷ್ಟೇ ಒತ್ತುಕೊಟ್ಟು ಹೇಳುವುದಿಲ್ಲ, ಬದಲಿಗೆ, ಆ ಕಾಲಘಟ್ಟದ ಬದುಕಿನ ಸಂಭ್ರಮಗಳನ್ನು ಮನಮುಟ್ಟುವಂತೆ ವಿವರಿಸುತ್ತಾ, ಸಹೃದಯರನ್ನು ಆದರೊಳಕ್ಕೆ ಸೆಳೆದುಕೊಂಡು, ಆ ಸಂಭ್ರಮದ ಬದುಕನ್ನು ಬಲವಂತವಾಗಿ ತೊರೆದು, ಕಂಡು ಕಾಣದ ಕಾಡು ಮೇಡಿನ ಪ್ರದೇಶಕ್ಕೆ ವಲಸೆ ಹೋಗಿ, ಹೊಸದಾಗಿ ಬದುಕು ಕಟ್ಟಿಕೊಳ್ಳಬೇಕಾದ ಕಾಲದ ನೋವು ಕಷ್ಟಗಳ ಕುರಿತೂ ಹೇಳುತ್ತಾರೆ. ತಲೆತಲಾಂತರದಿಂದ ನೆಲೆ ನಿಂತಿದ್ದ ಹಳ್ಳಿಯ ಜನ ಮುಳುಗಡೆಯಿಂದಾಗಿ ಬುಡ ಅಲುಗಿ, ತಮ್ಮ ಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಅಸ್ತಿತ್ವವನ್ನು ಬೇರು ಸಮೇತ ಕಿತ್ತು ಕೊಂಡು ಹೋಗಬೇಕಾದಾಗ ನೋವಿನ ತೀವ್ರತೆಯನ್ನು ಅಲ್ಲಲ್ಲಿ ಪುಟ್ಟಜ್ಜಿ ಹಾಗೂ ಕೆಲ ಹಿರಿಯರ ಬಾಯಲ್ಲಿ ಸಮಯೋಚಿತವಾಗಿ ಹೇಳಿಸುತ್ತಾರೆ. ಆರಂಭದಲ್ಲಿ, ತಮ್ಮ ಜಮೀನಿನ ಮಣ್ಣನ್ನು ಜೆಸಿಬಿಯಲ್ಲಿ ಆಗೆದು ಡ್ಯಾಂ ಸ್ಥಳಕ್ಕೆ ಸಾಗಿಸುವಾಗ “ನಮ್ಮ ಬದುಕನ್ನೆಲ್ಲಾ ಅಗೆದು ಡ್ಯಾಮಿಗೆ ತುಂಬಿಸ್ತಾರಲ್ಲಪ್ಪ” ಎಂದು ತನ್ನ ದೇಹದ ಒಂದು ಅಂಗವನ್ನೇ ಕತ್ತರಿ ಸುತ್ತಿದ್ದಾರೇನೋ ಎಂಬಂತೆ ಹಲುಬುವ ಪುಟ್ಟಜ್ಜಿ, ಡ್ಯಾಮ್ ನಿರ್ಮಾಣದ ನಂತರ ಹಂತ ಹಂತವಾಗಿ ನೀರು ತುಂಬ ತೊಡಗಿ, ತಾವು ತಗ್ಗಿನಲ್ಲಿ ಬಿಟ್ಟು ಬಂದಿದ್ದ ಹಳೆಯ ಮನೆಯ ಗೋಡೆಗಳು ಕುಸಿಯತೊಡಗಿದಂತೆ, ಭಾವುಕರಾಗಿ ಸಣ್ಣಮಕ್ಕಳಂತೆ ಅದರೊಳಗೆಲ್ಲಾ ಓಡಾಡಿ “ಆಯ್ಯೋ ನಾವು ಬಾಳಿ ಬದುಕಿದ ಮನೆಗಳು ನಮ್ಮ ಕಣ್ಮುಂದೆಯೇ ನೀರಿನಲ್ಲಿ ಮುಳುಗಿ ಹೋಗ್ತಾವಲ್ಲಾ.. ನಾವು ಇಲ್ಲಿ ಓಡಾಡ್ತಿದ್ವಿ... ಇಲ್ಲಿ ಮಲಗಿದ್ವಿ... ಇಲ್ಲಿ ಒಳಕಲ್ಲಿತ್ತು. ಇಲ್ಲಿ ಬಚ್ಚಲು ಮನೆಯಿತ್ತು... ನಮ್ಮ ಕಣ್ಣೆದುರಲ್ಲೇ ನುಂಗಿ ನೀರು ಕುಡಿತೀಯಲ್ಲೇ ತಾಯಿ” ಎಂದು ನೀರನ್ನು ಬೊಗಸೆಯಲ್ಲಿ ಹಿಡಿದು ಶಪಿಸುವಂತಹ ಮಾತುಗಳು ಓದುಗರ ಮನ ಕಲಕುತ್ತವೆ’ ಎಂದು ಲೇಖಕರ ನಿರೂಪಣಾ ಶೈಲಿಯನ್ನು ಪ್ರಶಂಸಿಸುತ್ತಾರೆ.
©2024 Book Brahma Private Limited.