‘ಎಲ್ಲಾನು ಮಾಡುವುದು ಹೊಟ್ಟೆಗಾಗಿ’ ಲೇಖಕ ಜೋಗಿ ಅವರ ಅನುಭವ ಕಥನ. ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಅಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೇನಾಗ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು, 'ನಾವು' ಎಂದರೇನೆಂದು ನಮಗೇ ಗೊತ್ತಾಗದಿರುವುದು ಇದೆಲ್ಲಾ ನೋಡಿದರೆ ನಾವು ತೀರಾ ಪರೋಕ್ಷವಾಗಿ ಸಾವೆಂಬ ಆರಕ್ಕೆ ಮೂರಡಿ ಅಂತಿಮ ಸತ್ಯವನ್ನು ಒಳಗೊಳಗೇ ಹೊತ್ತು ತಿರುಗಾಡುತ್ತೇವೆ ಅನ್ನಿಸುತ್ತದೆ. ಅದಕ್ಕೆ 'ಬದುಕು' ಎಂದು ಹೆಸರಿಟ್ಟಿದ್ದೇವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ.
ಈ ಅನುಭವ ಕಥನ ಓದಿದಾಗ ಬರೆದವರು ತಮ್ಮ ಸ್ವಂತ ದೇಹದ ಬಗ್ಗೆ ಹದಿನೈದು ದಿನಗಳ ಕಾಲ ಎಷ್ಟು ಕಾಳಜಿ ವಹಿಸಿದ್ದರೋ, ಓದುವವರು ಒಂದೆರಡು ಗಂಟೆಗಳ ಕಾಲ ಅಷ್ಟೇ ಕಾಳಜಿ ವಹಿಸುತ್ತಾರೆ ಅನ್ನಿಸುತ್ತದೆ. ವಿವರಣೆಗಳಲ್ಲಿ ಮಾನವ ದೇಹ ಮತ್ತು ಆರೋಗ್ಯದ ನಿಗೂಢತೆಗಳೆಲ್ಲ ಲಘು ಹಾಸ್ಯದಲ್ಲಿ ಬಿಚ್ಚಿಕೊಂಡರೂ, ನಗುವ ಕಂಗಳಲ್ಲೇ ನಮ್ಮ ನಮ್ಮ ಹೊಟ್ಟೆಗಳ ಕಡೆ ತುಸು ವಿಷಾದದಿಂದಲೇ ನೋಡಿಕೊಳ್ಳುವಂತಾಗುತ್ತದೆ.ಅಂತಹ ಅನುಭವಗಳನ್ನು ತಮ್ಮದೇ ವಿಶಿಷ್ಛ ಶೈಲಿಯಲ್ಲಿ ಜೋಗಿಯವರು ಬರೆದಿದ್ದಾರೆ.
©2024 Book Brahma Private Limited.