'ಉರುಳಿನ ನೆರಳಲ್ಲಿ' ಪುಸ್ತಕಕ್ಕೆ ಬರೆದಿರುವ ಒಂದು ಟಿಪ್ಪಣಿಯಲ್ಲಿ ಅಗಸ್ತಿನಾ ಪ್ಯೂಚರ್ ಹೇಳುತ್ತಾರೆ: 'ವಿಮೋಚನೆ ಹೊಂದಿದ ನನ್ನ ತಾಯ್ನಾಡಿಗೆ ಹಿಂದಿರುಗಿದ ಮೇಲೆ ನಾನು ನನ್ನ ಪತಿಗಾಗಿ ಹುಡುಕಾಡಿದೆ. ನನ್ನ ಹಾಗೆಯೇ ಸಾವಿರಾರು ಜನರು ತಮ್ಮ ತಮ್ಮ ಪತಿ, ಪತ್ನಿ, ಮಕ್ಕಳು, ತಂದೆ, ತಾಯಿಯರನ್ನು ನಾಡಿನ ಉದ್ದಗಲದಲ್ಲೂ ಮತ್ತೆ ಮತ್ತೆ ಹುಡುಕಾಡುತ್ತಿದ್ದರು. ಜರ್ಮನ್ ಆಕ್ರಮಣಗಾರರು ಅಸಂಖ್ಯಾತ ಚಿತ್ರಹಿಂಸೆಯ ಕೂಡುದೊಡ್ಡಿಗಳಿಗೆ ಅವರನ್ನು ಬಲಾತ್ಕಾರದಿಂದ ಎಳೆದೊಯ್ದಿದ್ದರು. ನನ್ನ ಪತಿಗೆ ನಾಜಿ ನ್ಯಾಯಾಲಯ ಮರಣದಂಡನೆ ವಿಧಿಸಿದ ಹದಿನಾಲ್ಕನೆಯ ದಿನ – 1943 ಸೆಪ್ಟೆಂಬರ್ 8ರಂದು ಅವರನ್ನು ಗಲ್ಲಿಗೇರಿಸಲಾಗಿತ್ತೆಂದು ನಾನು ತಿಳಿದೆ. ಪ್ರಾಗ್ ನಗರದ ಪಾಂಕ್ರಾಟ್ಸ್ ಸೆರೆಮನೆಯಲ್ಲಿದ್ದಾಗ ಜ್ಯೂಲಿಯಸ್ ಪ್ಯಾಚಿಕ್ ಕೆಲವು ಟಿಪ್ಪಣಿಗಳನ್ನು ಬರೆದಿದ್ದರೆಂದು ಸಹ ನನಗೆ ಗೊತ್ತಾಯಿತು. ಏ. ಕೊಲಿನ್ ಎಂಬ ಜೆಕ್ ಸೆರೆಮನೆ ಕಾವಲುಗಾರ ಫ್ಯಚಿಕ್‌ರವರ ಜೈಲು ಕೋಣೆಗೆ ಕಾಗದ ಮತ್ತು ಸೀಸದಕಡ್ಡಿ ತಂದುಕೊಟ್ಟು ಅವರು ಬರೆದಿಟ್ಟ ಕಾಗದದ ಹಾಳೆಗಳನ್ನು ಗುಟ್ಟಾಗಿ ಒಂದೊಂದಾಗಿ ಹೊರಗೆ ಸಾಗಿಸಿದ್ದರು. ಆ ಕಾವಲುಗಾರನನ್ನು ನಾನು ಸಂಧಿಸಿದೆ. ಕೊನೆಗೆ ನನ್ನ ಪತಿ ಪಾಂಕ್ರಾಟ್ಸ್ ಜೈಲಿನಲ್ಲಿ ಬರೆದಿದ್ದ ಟಿಪ್ಪಣಿಗಳನ್ನು ಸಂಗ್ರಹಿಸಿದೆ. ಕ್ರಮಾಂಕಗಳನ್ನು ಹೊಂದಿದ್ದ ಆ ಹಾಳೆಗಳು ವಿಶ್ವಸ್ಥರಾದ ಬೇರೆ ಬೇರೆ ಜನರಲ್ಲಿ ಅಡಗಿದ್ದವು. ಅವರಿಂದ ಅವುಗಳು ನಮಗೆ ದೊರೆತವು. ಅವುಗಳನ್ನು ಈ ಪುಸ್ತಕದ ಓದುಗರಿಗೆ ಅರ್ಪಿಸಲಾಗಿದೆ. ಇದು ಜೂಲಿಯಸ್ ಫ್ಯಾಚಿಕ್ರವರ ಜೀವನದ ಕೊನೆಯ ಅಧ್ಯಾಯವಾಗಿದೆ.
ಕೃತಿಯನ್ನು ಪರಿಣಾಮಕಾರಿಯಾಗಿ ಕನ್ನಡಕ್ಕಿಳಿಸುವಲ್ಲಿ ವಾಸು ದೇವ ಯಶಸ್ವಿಯಾಗಿದ್ದಾರೆ.
©2024 Book Brahma Private Limited.