ಅಮ್ಮ ಎಂಬ ಸಾರ್ವತ್ರಿಕ ಪ್ರಪಂಚದ ಪರಿಧಿ ದೊಡ್ಡದು. ಅಮ್ಮಂದಿರ ಕುರಿತು ಹೇಳುವಾಗ ಅನೇಕ ಸಾಮ್ಯಗಳು ಸಹಜ. ಹಾಗಾಗಿ ಅಮ್ಮ ಎಂಬ ಬಹುದೊಡ್ಡ ಜಗತ್ತನ್ನು ಅನನ್ಯವಾಗಿ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ. ಆ ಕಾರಣದಿಂದ ಅಮ್ಮನ ಕುರಿತು ಯಾರೇ ಬರೆದರೂ ಅದು ಪ್ರತಿಯೊಬ್ಬ ಅಮ್ಮಂದಿರ ಬಹುತೇಕ ವಿವರಗಳನ್ನು ಹೇಳುತ್ತದೆ. ಹಾಗಾಗಿ ಇದು ನಮ್ಮಮ್ಮನ ಕತೆ ಅಲ್ಲವೇ?' ಎಂದು ಅನಿಸುವುದು ಸಹಜ. ಅಷ್ಟರ ಮಟ್ಟಿಗೆ ಅಮ್ಮಂದಿರ ಜಗತ್ತು ಸಾರ್ವತ್ರಿಕ. ಇಲ್ಲಿ ಅಮ್ಮನ ಕುರಿತು ಹೇಳುವಾಗ ಆನುಷಂಗಿಕವಾದ ಸಾಂಸ್ಕೃತಿಕ, ಸಾಮಾಜಿಕ, ಕೌಟುಂಬಿಕ ವಿಷಯಗಳ ಸಾವಯವ ಸಂಬಂಧ ಸಹಜವಾಗಿಯೇ ಬಂದಿವೆ. ಅಮ್ಮನ ಮನೆವಾರ್ತೆ, ಕೃಷಿ, ಗೃಹ ಕೈಗಾರಿಕೆ, ಕೈತೋಟಗಳ ಕುರಿತ ಜ್ಞಾನಗಳು ಸೇರಿದ ಒಟ್ಟು ಒಕ್ಕಲುತನ, ಬದುಕಿನ ಬಗೆಗಿನ ತೀವ್ರ ಮೋಹ, ಎಲ್ಲರೆದುರು ತಲೆ ಎತ್ತಿ ಬಾಳಬೇಕೆಂಬ ಛಲ, ಅದಕ್ಕಾಗಿ ನಡೆಸುವ ಹೋರಾಟಗಳ ಚಿತ್ರಣ ಇಲ್ಲಿದೆ.
©2024 Book Brahma Private Limited.