ಕವಿರಾಜ ಮಾರ್ಗವಲ್ಲವಿದು ಕಾಮರಾಜ ಮಾರ್ಗ ರಾಜಕಾರಣಿಗಳ ವೈಯಕ್ತಿಕ ಜೀವನವನ್ನು ಕಥಾ ವಸ್ತುವನ್ನಾಗಿಟ್ಟುಕೊಂಡು ಬರೆದಂತಹ ಪುಸ್ತಕ. ರಾಜ್ಯದ ಪ್ರಸಿದ್ಧ ರಾಜಕಾರಣಿಗಳು ಹಾಗೂ ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು ಕರೆಸಿಕೊಂಡಂತಹ ವ್ಯಕ್ತಿಗಳ ಯಾವ ರೀತಿ ತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡರು ಎಂಬ ಕುರಿತು ಈ ಪುಸ್ತಕ ಬರೆಯಲ್ಪಟ್ಟಿದೆ. ಅಪರಾಧ, ಕಾಮ, ಪ್ರೇಮ, ರಾಜಕಾರಣದ ಚದುರಂಗದಾಟ ಹೀಗೆ ಹಲವು ಒಗ್ಗರಣೆಗಳನ್ನು ಒಳಗೊಂಡಂತಹ ಪುಸ್ತಕವಿದು. ಇದೊಂದು ಕಾದಂಬರಿಯೂ ಹೌದು ಸತ್ಯ ಘಟನೆಗಳೆನ್ನಬಹುದಾದ ಘಟನೆಗಳ ಕಾಲ್ಪನಿಕ ನಿರೂಪಣೆಯೂ ಹೌದು. ಪುಸ್ತಕವನ್ನು ವಿಶ್ಲೇಸಿಸುವ ಅಧಿಕಾರ ಓದುಗರಿಗೆ ಬಿಟ್ಟದ್ದು. ಏಕೆಂದರೆ ಕಾಮವನ್ನು ಪ್ರಧಾನವಾಗಿಟ್ಟುಕೊಂಡು ಬರೆಯಲಾದ ಪುಸ್ತಕವಿದು. ರಾಜಕರಣದಲ್ಲಿ ಅಧಿಕಾರವನ್ನು ಪಡೆಯಲು ಆಕಾಂಕ್ಷಿಗಳು ಏನೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದರ ವರ್ಣನೆ ಈ ಪುಸ್ತಕದಲ್ಲಿದೆ. 2006ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಪಡೆಯಲು ಕಸರತ್ತು ನಡೆಸಿದ ಒಂದು ರಾಷ್ಟ್ರೀಯ ಪಕ್ಷ ಮತ್ತುಒಂದು ಪ್ರಾದೇಶಿಕ ಪಕ್ಷಗಳ ಡೊಂಬರಾಟದ ಚಿತ್ರಣ ಈ ಪುಸ್ತಕದಲ್ಲಿ ಕಾಣಬಹುದು. ಯಾವ ರೀತಿ ಅಧಿಕಾರದ ಗದ್ದುಗೆ ಹಿಡಿಯಲು ಎರಡೂ ಪಕ್ಷಗಳ ನಾಯಕರು ಮತ್ತು ಜನಪ್ರತಿನಿಧಿಗಳು ರಾಜ್ಯದ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿದರು ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ರವಿ ಬೆಳಗೆರೆಯವರು ವಿವರಿಸುತ್ತಾರೆ.
©2024 Book Brahma Private Limited.