ಜಿ.ಎನ್. ಅಶೋಕವರ್ಧನ ಅವರ ಬದುಕೇ ಒಂದು ಸಾಹಸ. ತಮ್ಮ ತಂದೆ ಜಿ.ಟಿ. ನಾರಾಯಣ ರಾವ್ ಬಹುದೊಡ್ಡ ವಿಜ್ಞಾನ ಬರಹಗಾರ ಎಂಬ ಪ್ರಭಾವಳಿಯಿಂದ ಹೊರಬಂದು ತನಗೆ ತೋರಿದ ಹಾದಿಯಲ್ಲಿ ನಡೆಯುತ್ತಾ ಮಂಗಳೂರಿನಲ್ಲಿ ಅತ್ರಿ ಬುಕ್ ಹೌಸ್ ಕಟ್ಟಿ ಬೆಳೆಸಿದವರು. ವಯಸ್ಸು ಎಪ್ಪತ್ತು ದಾಟಿದರೂ ಅವರ ಉತ್ಸಾಹದ ಮುಂದೆ ಯುವಜನರು ನಾಚಿ ನೀರಾಗುತ್ತಾರೆ. ಇಳಿ ವಯಸ್ಸಿನಲ್ಲೂ ಎತ್ತಿನಹೊಳೆಯುದ್ದಕ್ಕೂ ಅಡ್ಡಾಡುತ್ತ, ಪಶ್ಚಿಮಘಟ್ಡ ಸೊರಗುತ್ತಿರುವುದಕ್ಕೆ ಮರುಗುತ್ತ, ನದಿ ಕಿನಾರೆಗಳಲ್ಲಿ ದೋಣಿ ಹುಟ್ಟುಹಾಕುತ್ತ, ಬ್ಲಾಗ್ ಬರೆಯುತ್ತ, ಹೊಸ ಪುಸ್ತಕಗಳನ್ನು ಕನಸುತ್ತ, ಏನೂ ತೋಚದಿದ್ದಾಗ ಕೊರಡು ಕೊನರುವಂತೆ ಮಾಡುತ್ತ ಇರಬಲ್ಲವರು.
ಕುಮಾರಪರ್ವತ ನಾಡಿನ ಚಾರಣಿಗರನ್ನು ಚುಂಬಕದ ರೀತಿಯಲ್ಲಿ ಸೆಳೆಯುತ್ತಿರುವ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ. ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದ ಪೂರ್ವಕ್ಕೆ ಮಲಗಿರುವ ಕುಮಾರ ಪರ್ವತ ಜೀವ ವೈವಿಧ್ಯದ ತಾಣ. ಅದು ಪುಷ್ಪಗಿರಿ ಎಂತಲೂ ಪ್ರಸಿದ್ಧ. ದಕ್ಷಿಣ ಕನ್ನಡ ಕೊಡಗಿನ ನಡುಮಧ್ಯೆ ನಿಂತಿರುವ ಕುಮಾರಪರ್ವತದ ಸುತ್ತಮುತ್ತ ಏನೇನಿದೆ ಎಂಬುದನ್ನು ವಿವರಿಸುವ ಪುಸ್ತಕ ಹಕ್ಕಿಗಳ ಕಲರವಕ್ಕೆ ಕಿವಿಯಾಗು, ಗಿಡಬಳ್ಳಿಗಳ ಹಸಿರು ನೋಡು ಎಂದು ಓದುಗರಿಗೆ ತಿಳಿಯಹೇಳುತ್ತದೆ.
ಕೃತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ ಕಾರಂತ, ’ಬಹುತೇಕ ಕನ್ನಡದ ಬರಹಗಾರರು, ಪಡಸಾಲೆಯ ಕುರ್ಚಿಯಲ್ಲೇ ಕುಳಿತು ನಿಸರ್ಗ ವಿಹಾರ ಮಾಡುವ ಶಿಷ್ಟ ವರ್ಗದ ಜನ, ಹಳೆ ತಲೆಮಾರಿನ ಶಿವರಾಮಕಾರಂತ, ಕುವೆಂಪು ಮತ್ತು ನಂತರದ ತೇಜಸ್ವಿ, ಆಲನಹಳ್ಳಿ ಕೃಷ್ಣ, ಕಳವೆ, ಚಿಣ್ಣಪ್ಪ ಇವರಂತೆ ನಿಸರ್ಗ ಸುತ್ತಾಡಿ, ದಣಿದು, ಸವಿದು, ಬರೆವ ಅಪರೂಪದ ಲೇಖಕರಲ್ಲಿ ಅಶೋಕ ಸೇರಿದ್ದಾರೆ. ಅವರು ಮೂವತ್ತು ವರ್ಷಗಳ ಅನುಭವದಲ್ಲೇ ಕಂಡ ವನ್ಯಪರಿಸರ, ಅದರಲ್ಲುಂಟಾದ ಬದಲಾವಣೆಗಳೂ ಮುಂದಿನ ಕಾಲದ ಸಾಹಿತಿಗಳಿಗೆ ಮಾತ್ರವಲ್ಲ, ಇಂದಿನ ಅರಣ್ಯ ಮತ್ತು ಸಮಾಜಗಳ ಬಗ್ಗೆ ಅರಿಯಲು ಆಸಕ್ತರಾದ ಎಲ್ಲರಿಗೂ ಉಪಯುಕ್ತವಾಗುವುದು ಖಚಿತ’ ಎಂದಿದ್ದಾರೆ.
©2024 Book Brahma Private Limited.