ಬಚ್ಚಿಟ್ಟ ಸತ್ಯಗಳು ಕೃತಿಯ ಮುನ್ನುಡಿಯಲ್ಲಿ ರಾಜೇಂದ್ರ ಚೆನ್ನಿ ಅವರು ಹೇಳಿರುವಂತೆ ಆತ್ಮಕಥಾನಕವು ಕನ್ನಡದಲ್ಲಿ ಬಂದ ಅತ್ಯಂತ ಬಿಚ್ಉಚಚ ಧೋರಣೆಯ ಹಾಗೂ ಪ್ರಾಮಾಣಿಕವಾದ ಆತ್ಮಕಥಾ ಮಾದರಿಯ ಬರಹಗಳಲ್ಲೊಂದಾಗಿದೆ. ಈ ಕೃತಿಯಲ್ಲಿ ಲೇಖಕರು ತಮ್ಮ ಇಮೇಜ್ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೇ ಅವರ ಅಸಹಾಯಕತೆ, ದೌರ್ಬಲ್ಯ, ತಪ್ಪು ನಿರ್ಧಾರಗಳು. ಅನುಭವಿಸಿದ ಅನುಭವಗಳೆಲ್ಲವನ್ನು ಬರೆದಿದ್ದಾರೆ. ಬಿ. ಚಂದ್ರೇಗೌಡರ ಬದುಕು, ಲಂಕೇಶ್ ಪತ್ರಿಕೆಯೊಂದಿಗಿನ ಒಡನಾಟ. ಮುಗ್ಧತೆ ಇವೆಲ್ಲವೂ ಈ ಕೃತಿಯೊಳಡಗಿದೆ. ಈ ಕೃತಿಯನ್ನು ಚಂದ್ರೇಗೌಡರನ್ನು ತಿಳಿಯಲು ಓದಬೇಕು ಎಂದುಕೊಳ್ಳದೆ ಪ್ರಾಮಾಣಿಕ ಪತ್ರಕರ್ತ ಹೇಗಿರುತ್ತಾನೆ ಎನ್ನುವುದನ್ನು ಅರಿಯಲು ಸೂಕ್ತ.
ಕಟ್ಟೆ ಪುರಾಣದ ಚಂದ್ರೇಗೌಡರು ಬಿಚ್ಚಿಟ್ಟ ಸತ್ಯಗಳು
ಸಮಕಾಲೀನ ಚರಿತ್ರೆಯ ಒಂದು ವಾರೆ ನೋಟ
ಇದು 'ಲಂಕೇಶ್ ಪತ್ರಿಕೆ'ಯ 'ಬಯಲು ಸೀಮೆ ಕಟ್ಟೆ ಪುರಾಣ' ಅಂಕಣದ ಮೂಲಕ ರಾಜ್ಯಾದ್ಯಂತ ಹೆಸರು ಮಾಡಿದ ಬಿ. ಚಂದ್ರೇಗೌಡರು ತಮ್ಮ ಬದುಕಿನ ಕೆಲವು ಆಯ್ದ ಅನುಭವಗಳನ್ನು ಆಧರಿಸಿ ಬರೆದ ಒಂದು ಸಡಿಲ ಆತ್ಮ ಕಥಾನಕ'. ಸಡಿಲ ಏಕೆಂದರೆ ಇದರಲ್ಲಿ ಅವರ ವೈಯಕ್ತಿಕ/ ಕೌಟುಂಬಿಕ ಬದುಕಿನ ವಿವರಗಳು ಇಲ್ಲ. ಎಲ್ಲವೂ ಸಾರ್ವಜನಿಕ ಜೀವನದಿಂದ ಆಯ್ದ ಪ್ರಸಂಗಗಳೇ. ನಾಗಮಂಗಲದ ಕಡೆಯ ಹಳ್ಳಿಯೊಂದರ ಬಡ ಕುಟುಂಬದ ಈ ಹುಡುಗ ಪಿಯುಸಿ ಫೇಲಾಗಿ ಮನೆಬಿಟ್ಟು ಬಂದು ಬೆಂಗಳೂರು ಸೇರಿ ಪಡಬಾರದ ಪಡಿಪಾಟಲನ್ನೆಲ್ಲ ಪಟ್ಟು ಅಕಸ್ಮಾತ್ ಲಂಕೇಶರ ಸಂಪರ್ಕಕ್ಕೆ ಬಂದ ನಂತರ ಪಡೆಯುವ ವ್ಯಕ್ತಿತ್ವದ ಹೊಸ ಆಯಾಮಗಳು ಯಾರನ್ನಾದರೂ ನಿಬ್ಬೆರಗಾಗಿಸುವಂತಹವು. ಈ ದೃಷ್ಟಿಯಿಂದ ಈ ಪುಸ್ತಕ ಕಳೆದ ಶತಮಾನದ 70ರ ದಶಕದಿಂದ ಈ ಶತಮಾನದ ಎರಡನೆಯ ದಶಕದ ಅರ್ಧ ಭಾಗದವರೆಗಿನ ಸುಮಾರು ನಲವತ್ತು ವರ್ಷಗಳ ಕರ್ನಾಟಕದ ಲಂಕೇಶ್ ಕೇಂದ್ರಿತ ಸಾಂಸ್ಕೃತಿಕ ಚರಿತ್ರೆಯ ಹಲವು ಘಟನೆಗಳ ಮೇಲೆ ಚಂದ್ರೇಗೌಡರಿಗೇ ವಿಶಿಷ್ಟವಾದ ವಾರೆ ನೋಟ ಬೀರುತ್ತಾ ತಬ್ಬಿಕೊಳ್ಳುತ್ತಾ ಕೊನೆಯವರೆಗೂ ಸ್ವಾರಸ್ಯಕರವಾಗಿ ಓದಿಸಿಕೊಂಡು ಹೋಗುತ್ತದೆ.
ಮುಖ್ಯವಾಗಿ ಬೆಂಗಳೂರು ಮೆಜೆಸ್ಟಿಕ್, ಅಜ್ಜಂಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಈ ಪುಸ್ತಕದ ಕಥಾ ಕೇಂದ್ರಗಳು, ಉದ್ಯೋಗ ಹುಡುಕಿಕೊಂಡು ಬೆಂಗಳೂರಿನ ಮೆಜೆಸ್ಟಿಕ್‌ನ ಸಿಹಿ ಅಂಗಡಿ ಮತ್ತು ನಂತರ ಹೋಟೆಲ್, ಆನಂತರ ಇಸ್ಪೀಟ್ ಕ್ಲಬ್‌ವೊಂದರಲ್ಲಿ ಸಹಾಯಕನಾಗಿ ಸೇರಿ ಸಲಿಂಗ ರತಿ ಸೇರಿದಂತೆ ಹಲವು ಅಸಹಾಯಕ ಪರಿಸ್ಥಿತಿಗಳನ್ನೆದುರಿಸುತ್ತಾ 'ಗಟ್ಟಿಯಾಗುವ ಕಾಲ ಕುರಿತ ಬರವಣಿಗೆ ಎಷ್ಟು ಮುಗ್ಧವಾಗಿದೆ ಎಂದರೆ, ಅಲ್ಲೇ ಚಂದ್ರೇಗೌಡರೆಂಬ ಲೇಖಕ ಸೃಷ್ಟಿಯಾದ ನಂತರ ತಮ್ಮೂರಿನ ರಾಜಕೀಯ ನಾಯಕರೊಬ್ಬರ ಶಿಫಾರಸ್ಸಿನ ಮೇರೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕರಾರಿನ ಮೇಲೆ ಕೆಳ ಹಂತದ ನೌಕರರಾಗಿ ಕೆಲಸಕ್ಕೆ ಸೇರಿಕೊಂಡ ಚಂದ್ರೇಗೌಡರು, ತನ್ನೊಳಗಿದ್ದ ಓದಿನ ಹಸಿವು ಮತ್ತು ಬದುಕಿನ ಅಸಹಾಯಕತೆಯಿಂದ ಹುಟ್ಟಿದ ನಮ್ರತೆ ಹಾಗೂ ಛಲಗಳು ಹದವಾಗಿ ಬೆರೆತ ವ್ಯಕ್ತಿತ್ವ ರೂಪುಗೊಳುತ್ತಾ, ಲಂಕೇಶರ ಸಹವಾಸದಲ್ಲಿ ಅದು ಪೂರ್ಣವಾಗಿ ಅರಳಿದ ಕಥೆಯ ಜೊತೆಗೆ ಗ್ರಂಥಾಲಯ ಇಲಾಖೆಯ ರಾಜಕಾರಣದಲ್ಲಿ ಸಿಕ್ಕಿಯೂ ಜಾಣತನದಿಂದ ಪಾರಾಗಿ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ನಿವೃತ್ತಿಯಾಗಲು ನೆರವಾದ ಅವರ ಗ್ರಾಮೀಣ ಕಸುವಿನ ಜಾಣೆಯ ಹಲವು ಪ್ರಸಂಗಗಳೂ ಇಲ್ಲಿ ಅನಾವರಣವಾಗುತ್ತವೆ.
ಇವುಗಳ ಮಧ್ಯೆ ನಾಗಮಂಗಲ ಸೀಮೆಯ ಕೊಲೆಪಾತಕದ ರಾಜಕಾರಣದ ವಿವಿಧ ಮಜಲುಗಳು ಮತ್ತು ಲಂಕೇಶರ ಒಡನಾಟದಿಂದಾಗಿ ಸೃಷ್ಟಿಯಾಗುವ ಹಲವು ಅವಕಾಶಗಳು ಮತ್ತು ವಿವಾದಗಳ ಸ್ವಾರಸ್ಯಗಳೂ ಈ ಪುಸ್ತಕದ ವಿವಿಧ ಅಧ್ಯಾಯಗಳಲ್ಲಿ ಸೇರಿಕೊಂಡು ಓದುಗರ ಕುತೂಹಲವನ್ನು ಕಾಯ್ದುಕೊಳ್ಳುತ್ತವೆ. ಇಲಾಖೆಯಲ್ಲಿನ ತಮ್ಮ ಮೇಲಿನ ತನಿಖೆಯ ಫಲವಾಗಿ ಶಿಕ್ಷೆ'ಯ ರೂಪದಲ್ಲಿ ಸಿಗುವ ಶಿವಮೊಗ್ಗಕ್ಕೆ ಆದ ವರ್ಗಾವಣೆ ಅವರ ಬದುಕಿನ ಖದರನ್ನೇ ಬದಲಾಯಿಸುವುದನ್ನು ಇಲ್ಲಿ ಕಾಣಬಹುದು. ಸಮಾಜವಾದ, ವಿಚಾರವಾದ, ದಲಿತ ಮತ್ತು ರೈತ ಚಳುವಳಿಯ ಕೇಂದ್ರವಾಗಿದ್ದ ಶಿವಮೊಗ್ಗ, ಚಂದ್ರೇಗೌಡರ ವ್ಯಕ್ತಿತ್ವದಲ್ಲಿನ ಕುತೂಹಲ ಮತ್ತು ಕ್ರಿಯಾಶೀಲತೆಗಳಿಗೆ ಕುಮ್ಮಕ್ಕು ಕೊಟ್ಟಂತಾಗಿ ಇಲ್ಲಿ ನಿರೂಪಿತವಾಗಿರುವ ಈ ಚಳುವಳಿಗಳ ಮತ್ತು ಲಂಕೇಶರ 'ಪ್ರಗತಿ ರಂಗದ ಅಭಿಯಾನ ಹಾಗೂ ಸಮಾಜಸೇವೆ ಖಯಾಲಿಯ ಕುರಿತ ಹಲವು ವಿವರಗಳು ದೂರ ನಿಂತೂ ಸ್ವಾರಸ್ಯ ಕೆಡದಂತೆ ಬರೆಯುವ ಲೇಖಕರ ಬರವಣಿಗೆಯ ಕೌಶಲ್ಯ ಮೆಚ್ಚುವಂತಿದೆ. ಕೊನೆಯಲ್ಲಿ ಲಂಕೇಶರ ನಿಧನದ ನಂತರ ಅವರ ಮಕ್ಕಳ ಪತ್ರಿಕೋದ್ಯಮದ ಕಥೆಯೂ ಇಲ್ಲಿದ್ದು, ಅದೂ ಕೂಡ ಸಾಕಷ್ಟು ವಸ್ತುನಿಷ್ಠವಾಗಿ ನಿರೂಪಿತವಾಗಿದೆ.
`ಬಯಲು ಸೀಮೆಯ ಕಟ್ಟೆ ಪುರಾಣ'ದಂತೆಯೇ ಈ ಪುಸ್ತಕವೂ ಸಾರ್ವಜನಿಕ ಜೀವನದ ಹಲವು ವ್ಯಕ್ತಿಗಳನ್ನು ಪಾತ್ರಗಳನ್ನಾಗಿ ಮಾಡಿಕೊಂಡು ಒಂದು ಸಮಕಾಲೀನ ಪುರಾಣವನ್ನು ಸೃಷ್ಟಿಸಿ ಲಘು ಮನರಂಜನೆಯೊಂದಿಗೇ ಅದರ ಮೇಲೆ ಒಂದಿಷ್ಟು ಹೊಸ ಬೆಳಕನ್ನೂ ಚೆಲ್ಲುವ ಪ್ರಯತ್ನ ಮಾಡುತ್ತದೆ. ಆದರೆ ಈ ಪುಸ್ತಕಕ್ಕೆ ಬಚ್ಚಿಟ್ಟ ಸತ್ಯಗಳು ಎಂದು ಏಕೆ ಹೆಸರಿಟ್ಟಿದ್ದಾರೋ ಗೊತ್ತಾಗುವುದಿಲ್ಲ. ಏಕೆಂದರೆ, ಇಲ್ಲಿರುವ ಸಂಗತಿಗಳು ಯಾರಿಂದ ಯಾರು ಬಚ್ಚಿಟ್ಟ ಸತ್ಯಗಳು ಎಂಬುದು ತಿಳಿಯುವುದಿಲ್ಲ!
-ಡಿ.ಎಸ್. ನಾಗಭೂಷಣ
ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಅಕ್ಟೋಬರ್ 2019)
©2024 Book Brahma Private Limited.