ಲೇಖಕ ಡಾ. ಕಿರಣ ಅಂಕ್ಲೇಕರ ಅವರು ಬರೆದ ಕೃತಿ ʻಬೂರಲ ಗದ್ದೆʼ. ಇದು ಇವರು ಬರೆದ ಎರಡನೇ ಕೃತಿಯಾಗಿದೆ. ಲೇಖಕ ಡಾ. ಶ್ರೀಪಾದ ಶೆಟ್ಟಿ ಅವರು ಪುಸ್ತಕದ ಮುನ್ನುಡಿಯಲ್ಲಿ, “ಎಪ್ಪತ್ತರ ದಶಕದಲ್ಲಿ ಶಿಕ್ಷಕರಾಗಿ ತಂದೆ-ತಾಯಂದಿರು ಸೇವೆ ಸಲ್ಲಿಸುತ್ತಿದ್ದ ಗೋಕರ್ಣದಲ್ಲಿ ತಮ್ಮ ಬಾಲ್ಯವನ್ನು ಕಳೆದಿರುವ ಡಾ. ಕಿರಣ ಅಂಶ್ಲೇಕರ ಅವರ ಗೋಕರ್ಣದ ಬೂರಲಗದ್ದೆಯನ್ನು ತಮ್ಮ ಅಭಿವ್ಯಕ್ತಿಯ ಕೇಂದ್ರವಾಗಿಸಿಕೊಂಡು ಹನ್ನೊಂದು ಕವನಗಳನ್ನು, ಆರು ಕಥೆಗಳನ್ನು ಹಾಗೂ ಕಲ್ಪನಾ ಟಾಕೀಸಿನ ನೆನಪಿನ ರೀಲುಗಳು ಎಂಬ ನೆನಪನ್ನು ಬರೆದಿದ್ದಾರೆ.
ಗೋಕರ್ಣಕ್ಕೆ ಪೌರಾಣಿಕ, ಚಾರಿತ್ರಿಕ, ಧಾರ್ಮಿಕ, ಪಾರಂಪರಿಕ ಹಾಗೂ ಜಾನಪದ ಹಿನ್ನೆಲೆಯಿದೆ. ಇದನ್ನು ಗೋಕರ್ಣ ಮಂಡಲ ಎಂದು, ಗೋಕರ್ಣ ಸೀಮೆಯೆಂದು ಕರೆಯಲಾಗುತ್ತದೆ. ಗೋಕರ್ಣದ ಅಧಿದೈವವಾಗಿರುವ ಮಹಾಬಲೇಶ್ವರ, ದ್ವಿಭುಜ ಗಣಪತಿ, ಸೌಮ್ಯಗೌರಿ, ಭದ್ರಕಾಳಿ, ತಾಮಗೌರಿ, ಕೋಟಿತೀರ್ಥ, ಜಟಾಯುತೀರ್ಥ, ಸಮುದ್ರ ಎಲ್ಲದಕ್ಕೂ ಮಹತ್ವವಿದೆ. ದೇಶದ ಎಲ್ಲ ಭಾಗಗಳಿಂದ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಮರಣಾನಂತರದ ಉತ್ತರಕ್ರಿಯೆ ಮತ್ತು ಮಹಾಲಯ ಶ್ರಾದ್ಧ ಮತ್ತು ಸಾಂವತ್ಸರಿಕ ಶ್ರಾದ್ಧವನ್ನು ಕ್ಷೇತ್ರಪುರೋಹಿತರ ಮೂಲಕ ಮಾಡಿಸಿಕೊಳ್ಳಲು ಜನ ಗೋಕರ್ಣಕ್ಕೆ ಬರುತ್ತಾರೆ.
ಇಲ್ಲಿಯ ಕವನ ಕತೆಗಳು, ಬಾಲ್ಯದ ನೆನಪು ಒಡನಾಟ ಕಂಡದ ಅನುಭವಗಳ ಸಹಜ ಹಾಗೂ ಸರಳ ಅಭಿವ್ಯಕ್ತಿಯಾಗಿದೆ, ಕತೆ ಹಾಗೂ ಕವನದ ಯಾವುದೇ ತಂತ್ರ-ಕೌಶಲ್ಯಗಳ ಮೊರೆ ಹೋಗದೆ ತಾನು ತಿಳಿದಿದ್ದನ್ನು ಓದುಗರಿಗೆ ತಿಳಿಯಹೇಳಬೇಕು ಎಂಬ ಒತ್ತಾಸೆಯೊಂದಿಗೆ ಇಲ್ಲಿ ನಿರೂಪಿಸಲಾಗಿದೆ. ಛಾಯಾಚಿತ್ರಗ್ರಾಹಕ ತನಗೆ ಇಷ್ಟವಾದುದನ್ನೆಲ್ಲ ಕ್ಲಿಕ್ಕಿಸಿ ಅದನ್ನು ಒಂದು ಆಲ್ಬಂ ಮಾಡಿಕೊಟ್ಟಂತೆ ಇಲ್ಲಿಯ ಬರವಣಿಗೆಯ ರೀತಿ, ಯಾವುದೇ ಬಗೆಯ ವಾಗಾಡಂಬರವಿಲ್ಲದೆ ತಾನು ಕಂಡಿದ್ದನ್ನು ಸಹೃದಯ ಓದುಗರಿಗೆ ಕಾಣಿಸಬೇಕು ಎಂಬ ಉತ್ಕಟವಾದ ಇಚ್ಛೆ ಇಲ್ಲಿಯ ಬರವಣಿಗೆಯ ಹಿಂದೆ ಕೆಲಸ ಮಾಡಿದೆ. ಅಂದಿನ ಬೂರಲಗದ್ದೆ ಇಂದು ಬದಲಾಗಿದೆ. ಬಹು ಜನರಿಗೆ ಅದರ ಹೆಸರು ಮರೆತಿರಬಹುದು ಎನ್ನುವ ಲೇಖಕರು ತಾನು ಅಂದು ಆಟವಾಡಿದ ಬೂರಲಗದ್ದೆ ತನ್ನ ಓರಗೆಯ ಮಕ್ಕಳಿಗೆ ಚಿನ್ನ ಸ್ವಾಮಿ ಸ್ಟೇಡಿಯಮ್ ಆಗಿತ್ತು ಎನ್ನುತ್ತಾರೆ. ಈ ಬೂರಲಗದ್ದೆಯೊಂದಿಗೆ ತಾನು ಕಳೆದ ಬಾಲ್ಯದ ದಿನಗಳ ಚೀಲವನ್ನು ಬಿಚ್ಚಿ ನಿಮ್ಮೊಂದಿಗೆ ಕವನ, ಕತೆಗಳ ಮೂಲಕ ಹಂಚಿಕೊಳ್ಳುತ್ತೇನೆ ಎಂದು ಲೇಖಕರು ತಮ್ಮ ಬರವಣಿಗೆಯ ಬಗೆಗೆ ಪೀಠಿಕೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.
©2024 Book Brahma Private Limited.