‘ಎಲ್ಲಿಂದಲೋ ಬಂದವರು’ ಕೃತಿಯು ಭಾರತಿ ಬಿ.ವಿ ಅವರ ಅನುಭವ ಕಥನವಾಗಿದೆ. ಕೃತಿಯ ಕುರಿತು ಟಿ.ಎನ್ ಸೀತಾರಾಮ್ ಅವರು, `ಈ ಪುಸ್ತಕ ಓದುತ್ತಾ ಹಲವಾರು ಘಟನೆಗಳು ನಮ್ಮನ್ನು ತಲ್ಲಣಗೊಳಿಸಿದರೆ, ಕೆಲವು ನಮ್ಮ ಮುಖದಲ್ಲೊಂದು ಮುಗುಳ್ನಗೆ ಮೂಡಿಸುತ್ತವೆ. ಜೊತೆಗೆ ಈ ಕಥಾಹಂದರದಲ್ಲಿ ನಮ್ಮ ಬದುಕಿನ ಪುಟಗಳು ತೆರೆಯುತ್ತ ಹೋಗುತ್ತವೆ ಎಂದಿದ್ದಾರೆ. ಲೇಖಕಿ ಈ ಪುಸ್ತಕದಲ್ಲಿ ತಮ್ಮ ಅನುಭವದ ಮೂಸೆಯಲಲ್ಲಿನ ವಿಚಾರಗಳನ್ನು ಬಿತ್ತುತ್ತಾ ಹೋಗುತ್ತಾರೆ. ಈ ವ್ಯವಹಾರಿಕ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಯಾರೋ ಎದುರಾಗಿ ನಮಗೆ ಸಹಾಯ ಹಸ್ತ ಚಾಚುತ್ತಾರೆ, ಯಾರೋ ನಾನಿದ್ದೇನೆ ಸುಮ್ಮನಿರು ಎಂದು ಭರವಸೆ ಕೊಟ್ಟು ಬಿಡುತ್ತಾರೆ. ಯಾರೋ this too shall pass ಎನ್ನುವ ಆತ್ಮೀಯ ನುಡಿಗಳನ್ನು ಆಡಿಬಿಡುತ್ತಾರೆ. ಅದು ಮಳೆಯಾಗುವ ಮುನ್ನ ಗಂಟೆಗಟ್ಟಲೆ ಕಟ್ಟುವ ಮೋಡದಂತಲ್ಲ.. ಕಗ್ಗತ್ತಲಿನ ಹಾದಿಯಲ್ಲಿ ಒಬ್ಬೊಂಟಿ ನಡೆವಾಗ ಸುಮ್ಮನೆ ಸುಳಿದು ಮಾಯವಾಗುವ ಕೋಲ್ಮಿಂಚಿನಂತೆ. ಕಣ್ಣು ಕೋರೈಸುವ ಬೆಳಕು ನೀಡಿ ಮಾಯವಾದ ನಂತರ ಹಾದಿ ತುಸು ನಿಚ್ಛಳವಾಗಿ ನಡೆಯಲು ಸುಗಮವಾಗಿ ಬಿಡುತ್ತದೆ. ಆ ಕ್ಷಣದಲ್ಲಿ ಅವರು ಸಹಾಯ ಮಾಡುವ ಅಗತ್ಯವೇನೂ ಇರುವುದಿಲ್ಲ..ಆದರೂ ಮಾಡುತ್ತಾರೆ. ಕೇಳಿದರೇ ಕೊಡಲು ಕೈ ತಡೆಯುವವರ ಜಗತ್ತಿನಲ್ಲಿ ಇಂಥ ಅಪರೂಪದವರೂ ಎದುರಾಗುವುದು ನನ್ನನ್ನು ಯಾವತ್ತೂ ವಿಸ್ಮಯಳಾಗಿಸುತ್ತದೆ. ಹೂ ಗುಚ್ಛವನ್ನು ಒಂದು ಹೂದಾನಿಯಲ್ಲಿಟ್ಟು, ಭರ್ತಿ ನೀರು ತುಂಬಿಸಿ ಕಾಂಡದ ತುದಿ ಮಾತ್ರ ದಿನವೂ ತುಸುವೇ ಕತ್ತರಿಸುತ್ತಿದ್ದರೆ ಎಷ್ಟೋ ಕಾಲ ಹೂವು ಬಾಡದೇ ಉಳಿಯುತ್ತದೆ. ನೆನಪುಗಳೂ ಹಾಗೆಯೇ ಆಗಿದ್ದು ‘ಎಲ್ಲಿಂದಲೋ ಬಂದವರು’ ಅಂಥವರ ನೆನಪಿನ ಗುಚ್ಛದ ಕೃತಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.