’ಹೆಡ್ಡಿಂಗ್ ಕೊಡಿ’ ಪುಸ್ತಕದ ಲೇಖಕಿ ಮಂಜುಳಾ ಹುಲಿಕುಂಟೆ. ಕಳೆದ ೨೫ ವರ್ಷಗಳಿಂದ ಯುವಜನರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂವಾದ ಎಂಬ ಸಂಸ್ಥೆ ಪುಸ್ತಕದ ರಚನೆಗೆ ಕಾರಣವಾಗಿದೆ. ಇಪ್ಪತೈದು ವರ್ಷಗಳಿಂದ ಯುವಜನರ ಸಮಸ್ಯೆಗೆ ಕಿವಿಯಾಗಿ, ಅರಿವಿನೊಂದಿಗೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕರಿಸುತ್ತಿರುವ ಸಂವಾದ ಸಂಸ್ಥೆ, ತನ್ನ ಕಾರ್ಯಚಟುವಟಿಕೆ ಭಾಗವಾಗಿ ಈ ಡ್ಯಾಕ್ಯುಮೆಂಟರಿ ಹೊರತರಲು ನಿರ್ಧರಿಸಿತ್ತು. ಇದೇ ಸಂಸ್ಥೆಯಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಮುಗಿಸಿ ಸುದ್ದಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ ಹುಲಿಕುಂಟೆ ಅವರಿಗೆ ಈ ಕೃತಿ ರಚನೆಯ ಜವಾಬ್ದಾರಿ ವಹಿಸಲಾಗಿತ್ತು. ಇದೊಂದು ಭಿನ್ನವಾದ ಕೃತಿ. ಇಲ್ಲಿ ಸುಮಾರು ೧೮ ಯುವಜನರ ಕಥೆಗಳಿದ್ದು ಈ ಕಥೆಗಳು ಸಮಾಜ ಯುವಸಮುದಾಯವನ್ನು ನೋಡುವ ದೃಷ್ಠಿಕೋನವನ್ನೇ ಬದಲಿಸುವಷ್ಟು ಗಾಢವಾಗಿವೆ. ಯುವತಲೆಮಾರಿನ ಬಗ್ಗೆ ಹಗುರವಾಗಿ ಮಾತನಾಡುವವರನ್ನು ನಿತ್ಯ ನೋಡುತ್ತವೆ ಇದ್ದರೂ ಅವರ ಸಮಸ್ಯೆಗಳು, ತಲ್ಲಣಗಳು ನಿರೀಕ್ಷೆಗಳು ಏನೆಂಬುದನ್ನು ಚಿಂತಿಸುವುದು ತೀರಾ ಕಡಿಮೆ. ಆದರೆ ಭಾರತದಲ್ಲಿ ಸುಮಾರು ಶೇ 60ರಷ್ಟು ಮಕ್ಕಳಿಗೆ ತಮ್ಮ ತಾರುಣ್ಯವನ್ನು, ಯೌವನವನ್ನು ಆರೋಗ್ಯಪೂರ್ಣವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಶೇ. 50ರಷ್ಟು ಮಕ್ಕಳಿಗೆ ಸುಂದರವಾದ ಬಾಲ್ಯವೇ ಇರುವುದಿಲ್ಲ. ಬಡತನದ ಕಾರಣಕ್ಕೋ, ಜಾತಿ, ಧರ್ಮದ ಕಾರಣಕ್ಕೋ, ಲಿಂಗತಾರತಮ್ಯದ ಕಾರಣದಿಂದಲೋ ಬಾಲ್ಯ, ಯೌವನವನ್ನು ಕಳೆದುಕೊಂಡು ತಮ್ಮದಲ್ಲದ ಜವಾಬ್ದಾರಿಗಳನ್ನು ಹೊತ್ತುಕೊಂಡು ನರಳುತ್ತಾರೆ. ಇಂತಹುದೇ ಯುವಜನರೊಂದಿಗೆ ಮಾತಿಗಿಳಿಯುವ, ಅವರ ಜೀವನಕ್ರಮವನ್ನು ಜೊತೆಯಿದ್ದು ಗಮನಿಸುವ ಲೇಖಕಿ ಅವರ ನೋವುಗಳಿಗೆ ರೂಪನೀಡುತ್ತಾರೆ. ಅವರ ಕಥೆಗಳನ್ನು ಕೇಳಿ ಅವುಗಳನ್ನು ಅವರದೇ ಶೈಲಿಯಲ್ಲಿ ಕಥೆಯಾಗಿಸಿ ಸಮಾಜದ ಎದುರಿಟ್ಟಿದ್ದಾರೆ. ಯುವ ಜನರೊಂದಿಗೆ ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆಗಳಿಗೆ ಈ ಪುಸ್ತಕ ತಲುಪಿದ್ದು ಸರ್ಕಾರದ ಎದುರು ಯುವತಲೆಮಾರಿನ ತಲ್ಲಣಗಳನ್ನಿಟ್ಟು ಪ್ರಶ್ನಿಸುವಲ್ಲಿ ಪುಸ್ತಕ ಸಹಕಾರಿಯಾಗಿದೆ.
©2024 Book Brahma Private Limited.