‘ಸಂಚಲನ’ ಹಿರಿಯ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರು ಆಂದೋಲನ ಪತ್ರಿಕೆಗೆ ಬರೆದ ಅಂಕಣ ಬರಹಗಳ ಸಂಕಲನ. ಇಲ್ಲಿ 2019-2020 ಅಂತರ ರಾಷ್ಟ್ರೀಯ, ರಾಷ್ಟ್ರೀಯ ಆಗುಹೋಗುಗಳ ಅವಲೋಕನವಿದೆ.
ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯದ ಎಲ್ಲ ಆಗು - ಹೋಗುಗಳನ್ನು ಗಣನೆಗೆ ತೆಗೆದುಕೊಂಡರೆ 2019 2020 ಅತ್ಯಂತ ಮಹತ್ವದ ಕಾಲಘಟ್ಟ, ಭಾರತದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿತ್ತು, ಅಲ್ಲಿ ಅಮೆರಿಕದಲ್ಲಿ ಟ್ರಂಪ್ ಅಧಿಪತ್ಯ. ಜಗತ್ತಿನೆಲ್ಲೆಡೆ ಕೋವಿಡ್ ಕಾರ್ಮೋಡ, ಸಾವು - ನೋವು - ಹಸಿವು, ವಲಸೆಯ ಹಾಹಾಕಾರ, ಜಗತ್ತು ಮುಗಿದೇ ಹೋಯಿತು ಎನ್ನುವಂತಹ ಸನ್ನಿವೇಶ. ಈ ಎಲ್ಲದರ ನಡುವೆ ಅಧಿಕಾರರೂಢ ವ್ಯವಸ್ಥೆಯ ಅಟ್ಟಹಾಸ. ಅವರವರ ಲಾಭಕ್ಕೆ ತಕ್ಕಂತೆ ಭಾಷೆ, ಧರ್ಮ, ಹಣ, ನವ-ಇತಿಹಾಸ. ಎಲ್ಲದರ ದುರ್ಬಳಕೆ, ಎಗ್ಗಿಲ್ಲದೇ ಸಾಗಿದ ಸನ್ನಿವೇಶವಿದು.
ಇಡೀ ಭಾರತದ ಮೇಲೆ ಹಿಂದಿ ಹೇರುವ, ಮಹಾತ್ಮ ಗಾಂಧಿಯನ್ನು ಇತಿಹಾಸದಲ್ಲಿ ಇಲ್ಲವಾಗಿಸಿ 'ನಕಲಿ ರಾಷ್ಟ್ರ ಪಿತ'ನನ್ನು ಸೃಷ್ಟಿಸುವ ಯತ್ನ, 'ಪ್ರಜಾಪ್ರಭುತ್ವ' ಎಂದರೆ ಚುನಾವಣೆ ಗೆಲ್ಲುವುದು – ಅಧಿಕಾರ ಹಿಡಿಯುವುದು ಎಂಬ ನಿಲುವು, ಅದಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ಎನ್ನುವ ಸ್ಪಷ್ಟ ಸಂದೇಶ. ಪ್ರಭುತ್ವದ ಈ ಅಟ್ಟಹಾಸದ ನೆರಳಲ್ಲಿ ಪ್ರಜಾಪ್ರಭುತ್ವದ ಎಲ್ಲ ಅಂಗಗಳು ಶಕ್ತಿಹೀನವಾಗಿ ನಿಲ್ಲಲು ಆರಂಭವಾದ ದಿನಗಳಿವು. ಅಂತಹ ಸಂಧರ್ಭದಲ್ಲಿ ಎಲ್ಲ ಆಗು ಹೋಗುಗಳಿಗೆ ಸಮಾಜದ 'ಸಾಕ್ಷಿ ಪ್ರಜ್ಞೆ'ಯಾಗಿ ಸ್ಪಂದಿಸಲು ನಡೆಸಿದ ಯತ್ನವೇ 'ಸಂಚಲನ'.
ಇದು ರಾಜ್ಯದ ಅತ್ಯಂತ ಗೌರವಾನ್ವಿತ ಮತ್ತು ವಿಶ್ವಾಸಾರ್ಹ ದಿನ ಪತ್ರಿಕೆಗಳಲ್ಲಿ ಒಂದಾದ ಮೈಸೂರು ಮೂಲದ 'ಆಂದೋಲನ' ದಲ್ಲಿ ಪ್ರತಿ ವಾರವೂ ಅಂಕಣವಾಗಿ ಮೂಡಿದ ಬರಹಗಳ ಸಂಕಲನ.
©2024 Book Brahma Private Limited.