'Ask The Editor' ಭಾಗ- 2 ’ ವಿಶ್ವೇಶ್ವರ ಭಟ್ ಅವರ ಅಂಕಣ ಸಂಕಲನವಾಗಿದೆ. ಈ ಕೃತಿಗೆ ನವೀನ್ ಸಾಗರ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ 'ಭಾನುವಾರ ಮುಂಜಾನೆ 'ವಿಶ್ವವಾಣಿ' ಪತ್ರಿಕೆ ತೆರೆದಾಕ್ಷಣ ಕಾಣುವ 'ಆಸ್ಕ್ ದ ಎಡಿಟರ್' ಅಂಕಣದ ಪ್ರಶ್ನೆಗಳನ್ನು ನೋಡಿದಾಕ್ಷಣ ಅನಿಸೋದು ಅರೇ ಇದು ನಾನು ಕೇಳಬೇಕೆಂದಿದ್ದ ಪ್ರಶ್ನೆ ಅಲ್ವಾ ಅಂತ. ಅದೇ ರೀತಿ ಉತ್ತರ ನೋಡಿದ ಕೂಡಲೇ ಅನಿಸೋದು ನನಗೆ ಯಾರಾದರೂ ಈ ಪ್ರಶ್ನೆ, ಕೇಳಿದ್ದರೆ ನಾನೂ ಕೂಡ ಹೀಗೆಯೇ ಉತ್ತರಿಸುತ್ತಿದ್ದೆನೋ ಏನೋ ಅಂತ. ಸಂಕೀರ್ಣ ಅನಿಸುವ ಪ್ರಶ್ನೆಗೆ ಸರಳ ಅನಿಸುವ ಉತ್ತರ. ಸಿಲ್ಲಿ ಅನಿಸೋ ಪ್ರಶ್ನೆಗೆ ವಾಹ್ ಅನಿಸುವ ಉತ್ತರ ಈ ಅಂಕಣದ ಗಮ್ಮತ್ತು. ಮನಸ್ಸಿನ ಮತ್ತು ಬದುಕಿನ ಕಗ್ಗಂಟುಗಳಿಗೆ ಇದೊಂದು ನಿಘಂಟು ಎನ್ನಬಹುದು. ಮನಸ್ಸು ಗೊಂದಲಕ್ಕೊಳಗಾದಾಗ ಒಮ್ಮೆ ಈ ಪುಸ್ತಕ ತೆರೆದು ನೋಡಿದರೆ ಯಾವುದಾದರೊಂದು ಪುಟದಲ್ಲಿ ಗೊಂದಲಕ್ಕೆ ಉತ್ತರ ಸಿಕ್ಕಿರುತ್ತದೆ. ಎಡಿಟರ್ ನೀಡುವ ಉತ್ತರ ಓದಿದಾಗ, ಅಯ್ಯೋ ಇಷ್ಟು ಸರಳವಾಗಿದೆಯಲ್ಲ... ನಂಗ್ಯಾಕೆ ಈ ಥರದಲ್ಲಿ ಯೋಚಿಸೋಕಾಗಿಲ್ಲ ಅನ್ನೋ ಹಾಗಿರುತ್ತದೆ. ಭಟ್ಟರು ತಮ್ಮದೇ ಶೈಲಿಯ ಪಂಚ್ಗಳೊಂದಿಗೆ ರಾಜಕಾರಣದ, ರಾಜಕಾರಣಿಗಳ ಎಕ್ಸಾಂಪಲ್ಗಳನ್ನು ತಂದು ಉತ್ತರದಲ್ಲೊಂದು ಜೀವಂತಿಕೆ ತುಂಬಿಬಿಡ್ತಾರೆ. ಹೇಳೋದೆಲ್ಲವನ್ನೂ ಹೇಳಿ... ಇಷ್ಟೇ ಗುರೂ ವಿಷ್ಯ... ನೀನು ಸುಮ್ನೆ ಅತಿಯಾಗಿ ಹಚ್ಕೊಂಡು ಬಿಟ್ಟಿದೀಯ ಅನ್ನೋ ಧಾಟಿಯಲ್ಲಿ ಮುಗಿಸಿಬಿಡ್ತಾರೆ. ಇಲ್ಲಿ ಸಾವಿರಾರು ಜನರ ಪ್ರತಿನಿಧಿಯಂತೆ ಒಬ್ಬ ಪ್ರಶ್ನೆ ಕೇಳಿರುತ್ತಾನೆ. ಒಬ್ಬನಿಗೆ ಉತ್ತರ ನೀಡುವ ಮೂಲಕ ಸಾವಿರಾರು ಜನರ ಮನಸಿನ ಗೊಂದಲವನ್ನು ಪರಿಹರಿಸಿರುತ್ತಾರೆ. ಭಟ್ರು ಡ್ರೋನ್ ಮೂಲಕ ನಮಗೆ ಸುಂದರ ಜಗತ್ತು ತೋರಿಸುವಂತೆ. ನಮ್ಮ ಬದುಕನ್ನು ನಾವು ಡ್ರೋನ್ ಕಣ್ಣಿನಿಂದ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಈ ಪುಸ್ತಕದ ಮೂಲಕ ದಾಟಿಸುತ್ತಾರೆ. 'ಆಸ್ಕ್ ದ ಎಡಿಟರ್' ಒಂದು ಜಾಲಿ ರೀಡ್. ನಮ್ಮಲ್ಲೂ ಒಂದು ಪ್ರಶ್ನೆ ಮೂಡಿ, ಭಟ್ಟರಿಂದ ಉತ್ತರ ಪಡೆಯೋಣ ಅನಿಸುವಂತೆ ಮಾಡುವ ಪ್ರಶೋತ್ತರ ಗುಚ್ಛ, ಡಿಪ್ರೆಸ್ಡ್ ಓದುಗನಲ್ಲೂ ಕಿರುನಗೆ ಮೂಡಿಸಬಲ್ಲ ಪಾಸಿಟಿವ್ ಪುಸ್ತಕ ಇದಾಗಿದೆ ಎಂದಿದ್ದಾರೆ.
©2024 Book Brahma Private Limited.