ಲೇಖಕಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಲಲಿತ ಪ್ರಬಂಧಗಳ ಸಂಕಲನ ‘ನೆಲದಾಯ ಪರಿಮಳ’. ವಿವಿಧ ನಿಯತಕಾಲಿಕಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿರುವ ನಲವತ್ತಕ್ಕೂ ಹೆಚ್ಚಿನ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ‘ಎಂತ ಗೊತ್ತುಂಟ ?‘... ಎಂಬಂತಹ ಸಹಜ ಆಪ್ತತೆಯ ಮಾತಿನ ಹರಟೆಯಂತೆಯೇ ಆರಂಭವಾಗುವ ಅವರ ಪ್ರಬಂಧಗಳಲ್ಲಿ ಬಾಲ್ಯದ ಬೆರಗು, ಕೌಮಾರ್ಯದ ಕನಸು ಮತ್ತು ಬದುಕಿನ ವಾಸ್ತವಗಳನ್ನು ಆಪ್ತವಾಗಿ ಅರುಹಿ, ಹೊರ ಬಂದೂ ದಣಪೆ ದಾಟಲಾರದ ಹೆಂಗಸರ ಅಂಗಳದಂಚಿಗೇ ಉಳಿದ ಕನವರಿಕೆಗಳನ್ನೂ ಈಗಾಗಲೇ ತಮ್ಮ ಪ್ರಬಂಧದಲ್ಲಿ ಪರಿಚಯಿಸಿದ್ದಾರೆ. ಇರುವುದನ್ನು ಒಪ್ಪುವ, ಬಂದಿದ್ದನ್ನು ಸ್ವೀಕರಿಸುವ ಈ ಆರ್ದ್ರ ಮನಸ್ಸು ಪ್ರವಾಹಕ್ಕೆ ಬಲಿಯಾದ ಬದುಕುಗಳ ಬಗ್ಗೆ ಕಳವಳಿಸಿ, ಈ ಪ್ರಾಕೃತಿಕ ಅವಘಡಕ್ಕೆ ಕಾರಣಗಳನ್ನೂ ಚಿಂತಿಸುತ್ತದೆ. ಬರೆಯುವ ಧ್ಯಾನ ಮತ್ತು ಸುಖದ ಬಗ್ಗೆ ಹೇಳುತ್ತಲೇ ಬರಹಗಳಿಂದಲೇ ಬರುವ ಬಹಿರ್ಮುಖತೆಯನ್ನು ಅದರ ಮುಜುಗರವನ್ನೂ ವಿವರಿಸಿ ಅಗತ್ಯವಾದ ಅಂತರ್ಮುಖತೆಯ ಬಗ್ಗೆ ಬೆರಳು ತೋರುತ್ತದೆ. ಕೌಟುಂಬಿಕತೆಯ ರೂಪವೇ ಆದ ಆದರಾತಿಥ್ಯ ಮತ್ತು ಕಾಲಿಕ ಪಲ್ಲಟಗಳ ನಡುವೆಯೂ ನಿಜ ‘ಗೃಹ’ದ ಗೃಹೀತವನ್ನು ಮನಗಾಣಿಸುವ ಇಂತಹ ಬಹರಗಳಲ್ಲೇ ಇರುವ ನಿಜವಾದ ಸ್ತ್ರೀ ಮತ್ತು ಅವಳ ವೈಚಾರಿಕತೆ ವರ್ತಮಾನಕ್ಕೆ ಅತ್ಯಗತ್ಯ ಎಂದು ಬರಹಗಾರ ಆನಂದ ಖುಗ್ವೇದಿ ಅವರು ಕೃತಿಯ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ.
©2024 Book Brahma Private Limited.