ಅಮೆರಿಕದಲ್ಲಿ ಕುಳಿತು ಕನ್ನಡವನ್ನು ಧ್ಯಾನಿಸುವ ಹಲವು ಮನಸ್ಸುಗಳಿವೆ. ಅಂತಹ ಮನಸ್ಸುಗಳಲ್ಲಿ ಮೀರಾ ಪಿ.ಆರ್. ಒಬ್ಬರು. ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯ, ಫೋಟೋಗ್ರಫಿ ಹೀಗೆ ಅವರ ಆಸಕ್ತಿಯ ಕ್ಷೇತ್ರಗಳು ಹಲವು. ’ದೂರ ಸಾಗರ’ ಅವರ ಅಂಕಣ ಬರಹ ಸೇರಿದಂತೆ ಇಪ್ಪತ್ನಾಲ್ಕು ಲೇಖನಗಳನ್ನು ಹೊಂದಿರುವ ಸಂಗ್ರಹ.
ಕೃತಿಗೆ ಬೆನ್ನುಡಿ ಬರೆದಿರುವ ಕವಿ ಜಯಂತ ಕಾಯ್ಕಿಣಿ, ಪರಿಚಿತದಲ್ಲಿ ಅಪರಿಚಿತವನ್ನು ಅಪರಿಚಿತದಲ್ಲಿ ಪರಿಚಿತವನ್ನು ಮನಗಾಣುವ ನಿಮ್ಮ ಈ ಬರಹಗಳು ಚುರುಕಾಗಿವೆ. ಅಕ್ಷರ ಮತ್ತು ಆಕಾರಗಳ ಮಿತಿಯನ್ನು ಅರಿತೂ ಹೊಸ ಸೂಕ್ಷ್ಮಗಳಿಗಾಗಿ ಚಡಪಡಿಸುವ ಮತ್ತು ಪಡಿಯಚ್ಚುಗಳನ್ನು, ಮೌಢ್ಯಗಳನ್ನು ನಿಂತ ಕಾಲಲ್ಲಿ ನಿರಾಕರಿಸುವ ನಿಮ್ಮ ನಿಲುವೇ ಈ ಎಲ್ಲ ಬರಹಗಳನ್ನು ಒಗ್ಗೂಡಿಸಿರುವ ಸೂತ್ರವಾಗಿದೆ’ ಎಂದಿದ್ದಾರೆ.
ಲೇಖಕಿ ಕಾವ್ಯಾ ಕಡಮೆ ನಾಗರಕಟ್ಟೆ ಅವರು ಹೇಳುವಂತೆ ’ಈ ಸಂಕಲನದ ವೈವಿಧ್ಯಮಯ ಲೇಖನಗಳು ಅನೇಕ ವಿಶಿಷ್ಟ ಗುಣಗಳಿಂದ ಗಮನ ಸೆಳೆಯುತ್ತವೆ. ಮುಖ್ಯವಾಗಿ ನನಗೆ ಈ ಬರಹಗಳಲ್ಲಿ ಇಷ್ಟವಾದದ್ದು ಲೇಖಕಿಯ unapologetic ಮನೋಭಾವ. ಯಾವುದೇ ಸಮಯದಲ್ಲೂ ಇಲ್ಲಿನ ಲೇಖನಗಳು ಸ್ವಮರುಕದ ಹಂಗಿನಲ್ಲಿ ನರಳುವುದಿಲ್ಲ. ಅಪ್ಪಟ ವೈಚಾರಿಕ ನಿಲುವಿನ ಗಟ್ಟಿ ಮನಸ್ಸೊಂದು ದಿನನಿತ್ಯದ ಆಗುಹೋಗುಗಳಿಗೆ, ಬಿಟ್ಟು ಬಂದ ನೆನಪುಗಳಿಗೆ ನಿಶ್ಚಲವಾಗಿ ತೆರೆದುಕೊಂಡಾಗ ನಿರಮ್ಮಳವಾಗಿ ಅರಳಬಹುದಾದ ಅನುಭವ ಕಥನ ಇಲ್ಲಿದೆ.’
©2024 Book Brahma Private Limited.