‘ಬೆಚ್ಚಿ ಬೀಳಿಸಿದ ಬೆಂಗಳೂರು’ ಲೇಖಕ ಸರ್ಜಾಶಂಕರ ಹರಳಿಮಠ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಡಾ. ಮೊಗಳ್ಳಿ ಗಣೇಶ ಅವರ ಬೆನ್ನುಡಿ ಬರಹವಿದೆ. ಸರ್ಜಾಶಂಕರ ಹರಳಿಮಠ ಅವರು ಅಂತಃಕರಣ ಆರ್ದ್ರತೆಯಲ್ಲಿ ಬದುಕನ್ನು ಚಿತ್ರಿಸುವ ಸಶಕ್ತ ಲೇಖಕರು, ಪ್ರಗತಿಪರ ಚಿಂತನೆಯ ಪರವಾದ ಚಳುವಳಿಗಳಲ್ಲಿ ತನ್ಮಯವಾಗಿ ಭಾಗಿಯಾಗುವ ಈ ಲೇಖಕರು ತಮ್ಮ ಬರಹದಲ್ಲಿ ಅಂತಿಮವಾಗಿ ಉಳಿಯಬೇಕಾದುದು ಮಾನವತ್ವವೇ ಎಂದು ಒತ್ತಾಯಿಸುವವರು. ಹಳ್ಳಿಯ ಹಳೆಕಾಲದ ಸಜ್ಜನಬಾಳುವೆಯನ್ನು ಗಾಢವಾಗಿ ಭಾವಿಸುತ್ತಾ ಬರೆಯುವ ಶಂಕರ ಒಳ್ಳೆಯ ಕಥೆಗಾರರು, ಅಂಕಣಕಾರರು ಮತ್ತು ದೇಸಿ ಬದುಕಿನ ಪ್ರಚಾರಕರು, ಹಾಗೆಯೇ ಸದಾ ಒಳಿತನ್ನು ಅರಸುವ ಉತ್ಸಾಹಿ ಉತ್ಕಟ ಲೇಖಕರು. ಇವರ ಬೆಚ್ಚಿ ಬೀಳಿಸಿದ ಬೆಂಗಳೂರು ಗಾಂದಿವಾದವನ್ನೂ, ಲೋಹಿಯಾ ಚಿಂತನೆಯನ್ನೂ, ಹಾಗೆಯೇ ಗೋಪಾಲಗೌಡರ ವಿಚಾರಗಳನ್ನೂ ಆಧುನಿಕತೆಯ ಜೊತೆಗಿಟ್ಟು ಪ್ರಾಮಾಣಿಕವಾಗಿ ನಿವೇದಿಸುವ ಅತ್ಯುತ್ತಮ ಕೃತಿ ಎನ್ನುತ್ತಾರೆ ಡಾ.ಮೊಗಳ್ಳಿ ಗಣೇಶ.
ಜೊತೆಗೆ ವೈಯಕ್ತಿಕ ಜೀವನಾನುಭವವನ್ನು ಸಾರ್ವಜನಿಕ ಬದುಕಿನೊಂದಿಗೆ ಸಂಯಮದಿಂದ ಕಲಾತ್ಮಕವಾಗಿ ನಿರೂಪಿಸುವ ಶಂಕರ್ ಅವರ ಬರಹಗಳು ಆಪ್ತವಾಗಿ ನಮ್ಮೊಳಗೆ ಬಂದು ಸೇರುತ್ತವೆ ಎನ್ನುತ್ತಾರೆ. ಆ ಮೂಲಕ ದೊಡ್ಡವರು ಹೇಳಲಾಗದೇ ಬಿಟ್ಟಿದ್ದನ್ನು ಶಂಕರ್ ತಮ್ಮ ಅನನ್ಯತೆಯಲ್ಲಿ ಅಭಿವ್ಯಕ್ತಿಸುತ್ತಿರುವುದು ಪರಂಪರೆಯ ಅರ್ಥಪೂರ್ಣ ಅನುಸಂಧಾನವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.