ಪಿ. ಸಾಯಿನಾಥ್ ಪ್ರಶಸ್ತಿ ಪುರಸ್ಕೃತ ಲೇಖಕ ಟಿ.ಕೆ. ದಯಾನಂದ ಅವರ ಅಂಕಣ ಬರಹಗಳ ಸಂಕಲನ ‘ರಸ್ತೆ ನಕ್ಷತ್ರ’. ಚಿತ್ರ ನಿರ್ದೇಶಕ, ಚಿತ್ರ ಕತೆಗಾರ, ಲೇಖಕ ಟಿ.ಕೆ. ದಯಾನಂದ್ ‘ಕೆಂಡಸಂಪಿಗೆ’ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳು ಇಲ್ಲಿ ಸಂಕಲನಗೊಂಡಿವೆ. ಈ ಅಂಕಣ ಅತ್ಯಂತ ವಿಭಿನ್ನವಾದದ್ದು. ಸಂಜೆಯ ಹೊತ್ತು ರಸ್ತೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ದಯಾನಂದ ಅವರು ತನ್ನದೇ ಕರುಳಬಳ್ಳಿಗಳಂತಿದ್ದವರ ಜೊತೆ ಮಾತನಾಡಿ ಫೋಟೋ ತೆಗೆದು, ನಡುರಾತ್ರಿಯ ಹೊತ್ತು ಅದನ್ನು ಕಂಪ್ಯೂಟರಿನಲ್ಲಿ ಕುಟ್ಟಿ ಮೇಲ್ ಮಾಡಿದರೆ ಮಧ್ಯಾಹ್ನದ ನಂತರ ಈ ಜೀವಗಳು ಕನ್ನಡ ಅಂತರ್ಜಾಲ ಲೋಕದಲ್ಲಿ ಇದು ತಮ್ಮದೇ ರಸ್ತೆ ಎಂಬಂತೆ ಸಹಜವಾಗಿ ಕಂಗೊಳಿಸುತ್ತಿದ್ದವು. ಇವರ ಮಾತುಗಳನ್ನು ಓದಿದರೆ ಅದನ್ನು ಕೇಳಿದಂತಾಗುತ್ತಿತ್ತು. ಕೇಳಿದರೆ ನೋಡಿದಂತೆ ಅನಿಸುತ್ತಿತ್ತು. ಈ ಜೀವಗಳ ಮೈಮೇಲೆ ದಯಾನಂದ ಬಂದು ಮಾತನಾಡುತ್ತಿದ್ದರೋ ಅಥವಾ ಈ ಜೀವಗಳೇ ಸದರಿ ಲೇಖಕರ ಮೈಮೇಲೆ ಬರುತ್ತಿತ್ತೋ ಗೊತ್ತಿಲ್ಲ. ಇದನ್ನೆಲ್ಲ ಓದಿದ ಓದುಗರು ಉಂಡು ಕುಡಿದು ಅಂದಿನ ಲೆಕ್ಕಾಚಾರ ಮುಗಿಸಿ ಮಗ್ಗುಲಾಗುವ ಮುನ್ನ ಅವರ ಮೆದುಳೊಳಗೆ ಈ ಜೀವಗಳು ಕೈಯಾಡಿಸುತ್ತಿದ್ದುದಂತೂ ನಿಜ ಎನಿಸುತ್ತಿತ್ತು. ರಸ್ತೆಯಲ್ಲಿ ಸಿಗುತ್ತಿದ್ದ ವಿಚಿತ್ರ ಬದುಕಗಳ ಕತೆಯನ್ನು ಅಷ್ಟೇ ಸೂಕ್ಷ್ಮವಾಗಿ ಬರೆಯುತ್ತಿದ್ದ ದಯಾನಂದ ಅವರ ಈ ಅಂಕಣ ಎಂತಹವರಲ್ಲೂ ಸೂಕ್ಷ್ಮಪ್ರಜ್ಞೆಯನ್ನು ಜಾಗೃತಗೊಳಿಸುತ್ತಿತ್ತು. ಆ ಅಂಕಣಬರಹಗಳ ಸಂಕಲನವೇ ಈ ಕೃತಿ.
©2024 Book Brahma Private Limited.