‘ಸಂಪಾದಕರ ಸದ್ಯಶೋಧನೆ ಭಾಗ -3’ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳಾಗಿವೆ. ಪ್ರತಿ ದಿನ ಅಂಕಣ ಬರೆಯುವುದೆಂದರೆ ಒಂದು ಶಿಸ್ತಿಗೆ ಸಜ್ಜಾಗುವುದು ಮತ್ತು ಅಂಥ ಶಿಸ್ತಿಗೆ ನಮ್ಮನ್ನು ಗುರಿಪಡಿಸಿಕೊಳ್ಳುವುದು. ಹೀಗಾಗಿ ನನ್ನ ಜಗತ್ತು ಎಲ್ಲಿಯೇ ಏಳಲಿ, 'ಸದ್ಯಶೋಧನೆ'ಯಲ್ಲಿಯೇ ಮುಳುಗುತ್ತದೆ. ಹೀಗಾಗಿ ಅದನ್ನು ಬಿಟ್ಟು ನನ್ನ ದಿನವಿಲ್ಲ. ಶೆಟ್ಟಿ ಜತೆಯಲ್ಲಿ ಪಟ್ಟಣ ಕಟ್ಟಿಕೊಂಡು ಹೋದ ಎನ್ನುವಂತೆ, ನಾನು ಎಲ್ಲಿಯೇ ಹೋಗಲಿ, ಹೋಗುವಲ್ಲೆಲ್ಲ 'ಸದ್ಯಶೋಧನೆ'ಯನ್ನೂ ಕಟ್ಟಿಕೊಂಡೇ ಹೋಗುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ಅದು ಬಿಟ್ಟು ನಾನಿಲ್ಲ. ಸ್ಕಾಟ್ಲೆಂಡಿನ ತುತ್ತತುದಿಯಿಂದ, ಮಂಗೋಲಿಯಾದ ಗಡಿಯಿಂದ, ಕತಾರ್ ನ ಫುಟ್ಬಾಲ್ ಮೈದಾನದಿಂದ, ಸೌದಿ ಅರೇಬಿಯಾದ ದಟ್ಟ ಮರುಭೂಮಿಯಿಂದ ಈ ಅಂಕಣಕ್ಕೆ ಬರೆದಿದ್ದೇನೆ. ಹೀಗಾಗಿ 'ಸದ್ಯಶೋಧನೆ' ನನ್ನ ನಿರಂತರ ಸಾಥಿ, ಶೋಧ. ಏನೂ ಬಯಸದ ಓದುಗನಿಗೆ, ಕೊನೆಯಲ್ಲಿ ಹೋಗುವಾಗ, ಏನನ್ನೋ ಕೈಯಲ್ಲಿಟ್ಟು ಪುಟ್ಟ ಅಚ್ಚರಿಯ ಕಚಗುಳಿ ಕೊಡುವ ಸಣ್ಣ ಇರಾದೆ ಬಿಟ್ಟು, ಇಲ್ಲಿನ ಬರಹಗಳಿಗೆ, ಬೇರೇನೂ ಇಲ್ಲದ ನಿರಾಭರಣತ್ವ ಭಾವ! ಹಾಗೆ ಇಲ್ಲಿನ ಬರಹಗಳು ಸದಾ ಬದುವನ್ನು ಸಡಿಲಿಸಿಕೊಳ್ಳುತ್ತಾ, ಹೊಸ ಪಾತಳಿಯನ್ನು ಕಂಡುಕೊಳ್ಳುತ್ತಾ, ಹಿಗ್ಗಿಸಿಕೊಳ್ಳುತ್ತಾ ಸರಾಗವಾಗಿ ಹರಿಯುವ ಅಜ್ಞಾತ ನದಿ. 'ಕರಗಿ, ಕರಗಿ, ನೀರಾದೆ ನಾನು' ಎಂಬುದಷ್ಟೇ ನನ್ನಲ್ಲಿ ಉಳಿಯುವ ಭಾವ ಎಂದಿದ್ದಾರೆ ಲೇಖಕ ವಿಶ್ವೇಶ್ವರ ಭಟ್.
©2024 Book Brahma Private Limited.