‘ಕಣ್ಣ ಕನ್ನಡಿಯಲ್ಲಿ-1’ ನಂದೀಶ್ ಬಂಕೇನಹಳ್ಳಿ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಲೇಖಕ ಎಚ್.ಎಸ್. ಸತ್ಯನಾರಾಯಣ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಮಲೆನಾಡಿನ ಮಡಿಲಲ್ಲಿ ಅರಳಿದ ಭರವಸೆಯ ಹೊಸತಲೆಮಾರಿನ ಲೇಖಕರಾದ ನಂದೀಶ್ ಬಂಕೇನಹಳ್ಳಿಯವರದು ಸೂಕ್ಷ್ಮ ಸಂವೇದಿಯಾದ ಮನಸ್ಸು. ಕಣ್ಣ ಕನ್ನಡಿಯ ಮೂಲಕ ಕಾಣಿಸಿರುವ ಅಪೂರ್ವ ವ್ಯಕ್ತಿ ಚಿತ್ರಗಳು ಇಲ್ಲವೆ. ಇಲ್ಲಿರುವ ಸ್ಥಳೀಯ ಚೇತನಗಳು ನೆಲಮೂಲ ಸಂಸ್ಕೃತಿಯವು. ಬದುಕಿನ ಬವಣೆಗಳಿಗೆ ಬೆಚ್ಚದೆ, ಆತ್ಮಬಲದಿಂದ ಎದುರಿಸಿ ನಿಂತು ಕಾಯಕನಿಷ್ಠೆಯನ್ನು ವ್ರತದಂತೆ ಸ್ವೀಕರಿಸಿದವರು, ಘನತೆಯ ಬದುಕನ್ನು ಕಟ್ಟಕೊಳ್ಳಲು ಹೆಣಗಿದವರು, ಕಣ್ಣೀರನ್ನು ಒರೆಸಿಕೊಳ್ಳುತ್ತ ಇತರರ ಕಣ್ಣೀರನ್ನು ತೊಡೆದವರು. ನಾಗರೀಕ ಜಗತ್ತಿನಲ್ಲಿ ಪ್ರಸಿದ್ಧರಲ್ಲದ ಅತಿ ಸಾಮಾನ್ಯರೊಳಗಿರುವ ಜೀವಪ್ರೀತಿಯನ್ನು ನಂದೀಶರ ಲೇಖನಿ ದಾಖಲಿಸಿದೆ.
ಕುವೆಂಪು ಅವರು ಹೇಳಿದ 'ಅಪತ್ರಿಕಾ ವಾರ್ತೆ'ಗೆ ಮಾದರಿಯಾದ ಕಣ್ಣ ಕನ್ನಡಿಯೊಳಗಣ ವ್ಯಕ್ತಿಚಿತ್ರಗಳೆಲ್ಲ ತಮ್ಮ ಕಥೆಯನ್ನು ತಾವೇ ಹೇಳಿಕೊಳ್ಳುವ ತಂತ್ರವನ್ನು ಲೇಖಕರು ಬಳಸಿರುವುದು ಅವ್ಯಕ್ತ ಆತ್ಮಕಥೆಗಳಿಗೊಂದು ಸ್ಪೇಸ್ ಒದಗಿಸಿದಂತಾಗಿದೆ. ನಮ್ಮ ಸುತ್ತಮುತ್ತಲಲ್ಲೇ ಇರುವ ಇಂತಹ ಶಕ್ತ-ಜೀವನೋತ್ಸಾಹದಿಂದ ಪುಟಿಯುವ ವ್ಯಕ್ತಿತ್ವಗಳೆಡೆ ನಮ್ಮ ಗಮನಹರಿಸಬೇಕಾದ ತುರ್ತನ್ನು ಒತ್ತಿಹೇಳುವ ಈ ಅಂಕಣ ಬರಹಗಳು ಶ್ರಮಸಂಸ್ಕೃತಿಯ ಬೆವರಿನ ಚರಿತ್ರೆಗೆ ಬರೆದ ಮುನ್ನುಡಿಯಂತಿದೆ. ತಮ್ಮ ಸುತ್ತಲನ್ನು ಎಚ್ಚರದಗಣ್ಣಿನಿಂದ ಗಮನಿಸಿ, ಈ ಬಗೆಯ ಬರಹಕ್ಕೆ ಮುಂದಾಗಲು ನಮ್ಮ ನಾಡಿನ ಹೊಸತಲೆಮಾರಿನ ಲೇಖಕರಿಗೆ ನಂದೀಶ್ ಬಂಕೇನಹಳ್ಳಿಯವರ 'ಕಣ್ಣಕನ್ನಡಿಯಲ್ಲಿ' ಕೃತಿಯು ಪ್ರೇರಣೆಯೊದಗಿಸಲಿದೆ. ಈ ಮೂಲಕ ಹೊಸ ವಸ್ತು ವೈವಿಧ್ಯತೆಯು ಸಾಹಿತ್ಯಲೋಕದ ಗಮನ ಸೆಳೆಯಲಿರುವುದು ಹರ್ಷದಾಯಕ ಸಂಗತಿ.
ಓದಿದಾಕ್ಷಣ ಮನಮುಟ್ಟುವ ಸರಳವಾದ ಭಾಷಾಕೌಶಲ ಈ ಲೇಖನದ ಬಹುದೊಡ್ಡ ಶಕ್ತಿ. ಈ ಶಕ್ತಿ ಮತ್ತಷ್ಟು ಅಮೂಲ್ಯವಾದ ಬರಹವನ್ನು ಕನ್ನಡ ಕಥನ ಪರಂಪರೆಗೆ ಜೋಡಿಸಲೆಂದು ಆಶಿಸುತ್ತಾ ಹೊಸತಲೆಮಾರಿನ ಹೊಸಲೇಖಕನ ಹೊಸಕೃತಿಯನ್ನು ಕನ್ನಡದ ಮನಸ್ಸುಗಳು ಪ್ರೀತಿಯಿಂದ ಬರಮಾಡಿಕೊಳ್ಳಲೆಂದು ಹಾರೈಸಿದ್ದಾರೆ.
©2024 Book Brahma Private Limited.