About the Author

ಪತ್ರಕರ್ತ, ಲೇಖಕ, ಕಾದಂಬರಿಕಾರ ಸತೀಶ್ ಚಪ್ಪರಿಕೆ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆಯವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯ ಹೋಟೆಲ್ ಉದ್ಯಮದಿಂದ ಬೆಂಗಳೂರಿಗೆ ಬಂದು ನೆಲಸಿದರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ‘ಬ್ರಿಟಿಷ್  ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದ ಏಕೈಕ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ  ಸತೀಶ್ ಲಂಡನ್‌ನ ವೆಸ್ಟ್ ಮಿನಿಸ್ಟರ್  ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದ್ದಾರೆ. ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೇವಲ ಬರವಣಿಗೆಯ ಶಕ್ತಿಯಿಂದಲೇ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಅಲ್ಲಿ ಪತ್ರಕರ್ತ ಜೀವನ ಆರಂಭಿಸಿದ ಅವರು ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ‘ಟಿವಿ9’, ‘ದಿ ಸಂಡೆ  ಇಂಡಿಯನ್’ ನಿಯತಕಾಲಿಕದ ಸಹಾಯಕ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅದಾದ ಮೇಲೆ ಒಂದು ವರ್ಷ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಸತೀಶ್ ನಂತರ ‘ವಿಆರ್‌ಎಲ್ ಮೀಡಿಯಾ’ ಸಂಸ್ಥೆಯ ಪ್ರಧಾನ ಸಂಪಾದಕರಾಗಿಯೂ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ್ದರು. ಆ ನಂತರ ಪತ್ರಿಕಾ ವ್ಯವಸಾಯಕ್ಕೆ ವಿದಾಯ ಹೇಳಿ ಕಳೆದ ಆರು ವರ್ಷಗಳಿಂದ ಬೆಂಗಳೂರು ಮೂಲದ ಅಂತರ್ ರಾಷ್ಟ್ರೀಯ ಸಂಸ್ಥೆ ‘ಫರ್ಬೆಂಡನ್  ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ‘ಪ್ರಜಾವಾಣಿ’ ಮತ್ತು ‘ಹಫಿಂಗ್ಟನ್ ಪೋಸ್ಟ್’ (ಇಂಗ್ಲಿಷ್)ನಲ್ಲಿ ಹಲವು ಅಂಕಣಗಳನ್ನು ಬರೆದಿದ್ದಾರೆ. 

ಮೂರು ದಶಕಗಳ ಹಿಂದೆ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಕಥೆಗಾರರಾಗಿ ಗುರುತಿಸಿಕೊಂಡ ಸತೀಶ್ ಚಪ್ಪರಿಕೆ ಅವರ ‘ಮತ್ತೊಂದು ಮೌನಕಣಿವೆ’ (ಪರಿಸರ ಲೇಖನಗಳು), ‘ಹಸಿರು ಹಾದಿ’ (ಅ.ನ.ಯಲ್ಲಪ್ಪ ರೆಡ್ಡಿ ಆತ್ಮಕತೆ), ವಿಶ್ವಕಪ್ ಕ್ರಿಕೆಟ್ (ಕ್ರಿಕೆಟ್ ಕುರಿತಾದ ಕೃತಿ), ಬೇರು (ಕಥಾ ಸಂಕಲನ), ಥೇಮ್ಸ್ ತಟದ ತವಕ ತಲ್ಲಣ (ಪ್ರವಾಸ ಕಥನ), ದೇವಕಾರು (ಜನಪರ ಲೇಖನಗಳ ಸಂಗ್ರಹ), ಮುಸಾಫಿರ್ (ಅಂಕಣ ಬರಹಗಳ ಸಂಗ್ರಹ) ಮತ್ತು ‘ಕಾಂಜಿ ಭಾಯಿ ಎ ಬಯೋಗ್ರಫಿ’ (ಇಂಗ್ಲಿಷ್) ಕೃತಿಗಳು ಪ್ರಕಟವಾಗಿವೆ. ಈ ಪೈಕಿ ‘ಥೇಮ್ಸ್ ತಟದ ತವಕ ತಲ್ಲಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ಹದಿನೆಂಟು ವರ್ಷಗಳ ದೀರ್ಘ ಕಾಲದ ನಂತರ ಅವರ ಎರಡನೇ ಕಥಾ ಸಂಕಲನ ‘ವರ್ಜಿನ್ ಮೊಹಿತೊ’ 2020ರಲ್ಲಿ ಪ್ರಕಟಗೊಂಡಿದೆ. ಅವರ ಮೊದಲ ಕಾದಂಬರಿ ‘ಘಾಂದ್ರುಕ್’ 2023ರಲ್ಲಿ ಅಂಕಿತಾ ಪುಸ್ತಕದಿಂದ ಪ್ರಕಟಗೊಂಡಿರುತ್ತದೆ. 

ಸತೀಶ್ ಚಪ್ಪರಿಕೆ

Awards

BY THE AUTHOR