ಡಾ.ಅಶೋಕ ಶೆಟ್ಟರ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದರು. ತಮ್ಮ ಊರು ಬೆಳಗಾವಿಯ ಬೈಲಹೊಂಗಲ ಹಾಗೂ ಅವರು ಕಲಿತು, ಬೋಧನಾ ವೃತ್ತಿ ಮಾಡಿದ ಧಾರವಾಡದ ಹಳೆಯ ನೆನಪುಗಳನ್ನು ಚೇತೋಹಾರಿಯಾಗಿ ಡಾ.ಅಶೋಕ ಶೆಟ್ಟರ್ ’ಗದ್ಯಂ ಹೃದ್ಯಂ’ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಬೇರೆ ಜಿಲ್ಲೆಗಳ ಸಾಹಿತಿಗಳು, ಬಂಡಾಯ ಸಾಹಿತ್ಯ ಸಂಘಟನೆ, ಸಾಧನಕೇರಿಯ ಪರಿಸರದ ಬಗ್ಗೆ ಬರೆದಿದ್ದಾರೆ. ರಿಸರ್ಚ್ ಫೆಲೊ ಆಗಿ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿದ್ದ ವೇಳೆ ಅಲ್ಲಿ ಕಂಡ ಸಿಖ್ಖರ ವಿರುದ್ಧದ ದೌರ್ಜನ್ಯದ ಚಿತ್ರಣವೂ ಕೃತಿಯಲ್ಲಿದೆ.
ಲೇಖಕಿ ಸಂಧ್ಯಾರಾಣಿ ಅವರು ಈ ಕೃತಿಯ ಬಗ್ಗೆ ಹೇಳುತ್ತಾ 'ಇತಿಹಾಸ ಕಲಿಸುವ ಮೇಷ್ಟ್ರಾಗಿರುವ ಅಶೋಕ್ ಶೆಟ್ಟರ್ ಅವರ ಬರಹಗಳಲ್ಲಿ ಒಂದೇ ಸಮಯಕ್ಕೆ ಮೇಷ್ಟ್ರರ ತಾಳ್ಮೆ, ವಿದ್ಯಾರ್ಥಿಗಳ ಲವಲವಿಕೆ ಕಂಡು ಬಂದರೆ ಆಶ್ಚರ್ಯ ಪಡಬೇಕಿಲ್ಲ. ಅವರ ಬರವಣಿಗೆಯಲ್ಲಿ ನೆನಪುಗಳ ಪ್ರಪಂಚದ ಜೊತೆಜೊತೆಗೆ ಕಣ್ಣೆದುರಿಗಿರುವ ಪ್ರಪಂಚ ಸಹ ಅಷ್ಟೇ ಸಹಜವಾಗಿ ಒಡಮೂಡಿರುತ್ತದೆ'. ಎಂದಿದ್ದಾರೆ.
ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಹತ್ತಾರು ವಿಷಯಗಳು ಇಲ್ಲಿ ಚರ್ಚೆಯಾಗುತ್ತವೆ. ಕೀ.ರಂ., ಏಣಗಿ ನಟರಾಜ್, ಸಾಕೇತ್ ರಾಜನ್, ಸಿ.ಬಸವಲಿಂಗಯ್ಯ ಅವರ ಕುರಿತಾದ ವ್ಯಕ್ತಿಚಿತ್ರಗಳನ್ನೂ ಈ ಕೃತಿ ಒಳಗೊಂಡಿದೆ.
©2025 Book Brahma Private Limited.