ವಿನಯಾ ಒಕ್ಕುಂದ ಅವರ ಅಂಕಣ ಬರಹಗಳ ಸಂಕಲಿತ ರೂಪ ನೀರನಡೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ವಿನಯಾ ಅವರು ದೇಶದ ಸಾಮಾಜಿಕ, ರಾಜಕೀಯ ಪ್ರಚಲಿತ ವಿದ್ಯಮಾನಗಳಿಗೆ ಲೇಖಕಿಯಾಗಿ, ಜನಸಾಮಾನ್ಯರ ಮನದಾಳದ ದುಗುಡವನ್ನು ಈ ಕೃತಿಯಲ್ಲಿರುವ ಲೇಖನಗಳ ಮೂಲಕ ಹೊರಗೆಡವಿದ್ದಾರೆ. ಸಾಹಿತ್ಯ, ಸಾಮಾಜಿಕ, ರಾಜಕೀಯ ಹಾಗೂ ಮಾನವೀಯ ಈ ಎಲ್ಲಾ ನೆಲೆಗಟ್ಟಿನಲ್ಲಿ ಮೂಡಿರುವ ಈ ಲೇಖನಗಳು ಇಂದಿನ ಸಮಾಜದ ಅವ್ಯವಸ್ಥೆಯ ಕನ್ನಡಿಯಂತಿವೆ.
ಜಾತಿ, ಧರ್ಮಗಳ ನೆಲೆಗಳಾಚೆ ನಿಂತು, ಬಹುತ್ವದ ಸಂಸ್ಕೃತಿಯನ್ನು ಕಟ್ಟಿಕೊಂಡು ಬದುಕಿದ ಇಲ್ಲಿನ ಜನರ ತಲ್ಲಣಗಳಿಗೆ, ನೋವಿಗೆ ಧ್ವನಿಯಾಗುತ್ತಾ; ನೊಂದವರ ಕಣ್ಣಿಗೆ ಕತವಸ್ತ್ರವಾಗಿದ್ದಾರೆ ಎನ್ನುವ ಜಗದೀಶ್ ಕೊಪ್ಪ ಅವರ ಮಾತುಗಳು ಅತಿರೇಕ ಅನ್ನಿಸುವುದಿಲ್ಲ. ಈ ಕೃತಿಯಲ್ಲಿ ಮುವತ್ತಕ್ಕೂ ಹೆಚ್ಚು ಲೇಖನಗಳಿವೆ. ಪ್ರತಿ ಲೇಖನವು ಆಯಾ ಸಂದರ್ಭದ ಪ್ರಚಲಿತ ವಿದ್ಯಮಾನದ ಬಗ್ಗೆ ಬರಹಗಾರ್ತಿಯಾಗಿ ಹಾಗೂ ಸಾಮಾನ್ಯ ಮಹಿಳೆಯಾಗಿ ಆ ವಿದ್ಯಮಾನ ಕಲಕಿದ ರೀತಿ, ಓದುಗರು ನೋಡಬೇಕಾದ ರೀತಿಯನ್ನು ಕಟ್ಟುಕೊಟ್ಟಿದ್ದಾರೆ.
©2024 Book Brahma Private Limited.