`ಚಹಾದ ಜೋಡಿ ಚೂಡಾದ್ಹಾಂಗ-4’ ಕೃತಿಯು ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಜಾವಾಣಿಯಲ್ಲಿ ಬರೆದ (1997-98ರಲ್ಲಿ ) 52 ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು, ಒಂದು ಪ್ರದೇಶದ ಒಂದು ಕಾಲಮಾನದ ಸಾಂಸ್ಕೃತಿಕ ದಾಖಲೆ. ಸಾಮಾನ್ಯ ಬರಹಗಾರನ ಲೇಖನಿಯಲ್ಲಿ ನೀರಸ ವರದಿಯಾಗಬಹುದಾಗಿದ್ದ ಈ ಬಗೆಯ ಬರವಣಿಗೆಯನ್ನು ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರು ತಮ್ಮ ಸೃಜನಶೀಲ ಪ್ರತಿಭೆಯಿಂದಾಗಿ ಇದನ್ನೊಂದು ಚೇತೋಹಾರಿ ಅನುಭವವನ್ನಾಗಿಸಿದ್ದಾರೆ. ಇಲ್ಲಿನ ಲೇಖನಗಳಲ್ಲಿ ಪಟ್ಟಣಶೆಟ್ಟರ ಆಸಕ್ತಿ ಬಹುಮುಖವಾಗಿದೆ. ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ರಂಗಭೂಮಿ, ಧರ್ಮ, ವ್ಯಕ್ತಿ, ಘಟನೆ, ಕನ್ನಡಪರ ಕೆಲಸ ಹೀಗೆ ಹಲವು ಬಗೆಯ ಚಟುವಟಿಕೆಗಳನ್ನು ಕುರಿತು ಪಟ್ಟಣಶೆಟ್ಟಿಯವರು ಇಲ್ಲಿ ಬರೆದಿದ್ದಾರೆ. ಇಲ್ಲಿನ ಎಲ್ಲ ಲೇಖನಗಳ ಹಿಂದೆ ಪ್ರಧಾನವಾಗಿ ಎದ್ದು ಕಾಣುವ ಅಂಶ ಜನಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾಳಜಿ, ಸುತ್ತ ಮುತ್ತಲಿನ ಪರಿಸರದ ಬಗ್ಗೆ ಗಾಢ ಪ್ರೀತಿಇ. ಸೂಕ್ಷ್ಮ ವಿಡಂಬನೆ, ನವಿರಾದ ಹಾಸ್ಯ, ಎಚ್ಚರಿಸುವ ದನಿ, ವಿಶಿಷ್ಟತೆಯನ್ನು ಗುರುತಿಸಿ ಹೇಳುವ ಆಸಕ್ತಿ- ಈ ಎಲ್ಲವೂ ಒಂದು ವಿಶಿಷ್ಟ ಹದದಲ್ಲಿ ಪಾಕಗೊಂಡು ಚಹಾದ ಜೋಡಿ ಆಪ್ತ ಆವರಣವನ್ನು ನಿರ್ಮಾಣ ಮಾಡುತ್ತದೆ; ಉತ್ತರ ಕರ್ನಾಟಕದ ಸಹಜ ಲಯದ ಭಾಷೆಯ ಸೊಗಸು ನಮ್ಮ ಅಂತರಂಗವನ್ನು ನೇರ ಮುಟ್ಟುತ್ತದೆ. ಇಂತಹ ಬರವಣಿಗೆ ಸುಲಭವಲ್ಲ. ಜನಪರ ಸಂಸ್ಕೃತಿಯ ಬಗ್ಗೆ ಪ್ರೀತಿಯಿರುವ ಮನಸ್ಸು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ’ ಎಂದಿದ್ದಾರೆ.
©2024 Book Brahma Private Limited.