'ಅಸಮಾನತೆಯ ಉದಾರೀಕರಣ' ಅಮ್ಮಸಂದ್ರ ಸುರೇಶ್ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಮುನ್ನುಡಿ ಬರೆದಿರುವ ಪ್ರಾಧ್ಯಾಪಕರಾದ ಡಾ.ಡಿ.ಸಿ. ನಂಜುಂಡ ಅವರು ಕೃತಿಯ ಕುರಿತು ತಿಳಿಸುತ್ತಾ 'ಜಾಗತೀಕರಣ ಮತ್ತು ಖಾಸಗೀಕರಣದ ಸಂದರ್ಭದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಮಸ್ಯೆಗೆ ಒಂದು ಬಲವಾದ ಮತ್ತು ವಿಶಿಷ್ಟವಾದ ಧ್ವನಿ ಇಂದು ಅವಶ್ಯಕವಾಗಿ ಬೇಕಾಗಿದೆ. ಒಳಗೊಳ್ಳುವಿಕೆ ಬೆಳವಣಿಗೆ ಎನ್ನುವುದು ಒಂದು ಬಿಸಿಲು ಕುದುರೆಯಾಗಿ ಪರಿವರ್ತನೆ ಆಗಿದೆಯೇ ಎನ್ನುವ ಅನುಮಾನ ಈಗ ದಟ್ಟವಾಗಿ ಕಾಡುತ್ತಿದೆ. ಪ್ರಸ್ತುತ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ಮೇಲಿನ ಅಂಶಗಳು ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಈ ಪುಸ್ತಕದ ಲೇಖನಗಳು ಹೇಳುತ್ತವೆ. ಕಳೆದ 75 ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಮನಿಸಿದರೆ ನಾವೆಲ್ಲ ಇನ್ನೂ ಬಹಳಷ್ಟು ದೂರ ದೂರ ಸಾಗಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ.
ಉದಾರೀಕರಣ ಎನ್ನುವುದು ಜಾಗತೀಕರಣದ ಒಂದು ಬಹುಮುಖ್ಯ ಅಂಗ. ಉದಾರೀಕರಣವನ್ನು ಅಸಮಾನತೆಗೆ ಜೋಡಿಸುವ ಪ್ರಯತ್ನ ವಿಶ್ವದೆಲ್ಲೆಡೆ ಬಹಳ ವರ್ಷಗಳಿಂದ ನಡೆಯುತ್ತಿದ್ದರೂ ಸಹ ಇಲ್ಲಿಂದ ಪ್ರತಿಕ್ರಿಯೆ ಬರುತ್ತಿರುವುದು ಸಮಾಜ ವಿಜ್ಞಾನಿಗಳಲ್ಲಿ ಗೊಂದಲವನ್ನು ಹೆಚ್ಚು ಮಾಡಿದೆ. ಉದಾರೀಕರಣ ಕುರಿತಾಗಿ ಇದುವರೆಗೆ ನಡೆದಿರುವ ನೂರಾರು ಸಂಶೋಧನೆಗಳ ಪ್ರಕಾರ ಹೇಳುವುದಾದರೆ ದರ್ಶನ ಪ್ರಕ್ರಿಯೆಯು ಕೋಟ್ಯಂತರ ಮಂದಿಯನ್ನು ಬಡತನದ ರೇಖೆಯಿಂದ ಸ್ವಲ್ಪ ಮೇಲೆ ಬಂದಿರುವ ಮತ್ತು ಆರ್ಥಿಕ ಸಂವರ್ಧನೆ, ನಿರ್ಧಾರ ಕೈಗೊಳ್ಳುವಿಕೆ, ಜಾತಿ ತಾರತಮ್ಯ, ಸಂಪತ್ತಿನ ಅಸಮಾನ ಹಂಚಿಕೆ ಒಳಗೊಂಡ ಬೆಳವಣಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಾಯ ಮಾಡುತ್ತಾ ಅಸಮಾನತೆಯ ಅಂತರವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೂ ಉದಾರಿಕರಣ ಅಸಮಾನತೆಯ ಅಂತರವನ್ನು ಸಂಪೂರ್ಣ ನಿವಾರಿಸುವುದರಲ್ಲಿ ಸೋತಿದೆ ಎನ್ನುವುದು ಸಹ ಅಷ್ಟೇ ಸತ್ಯ ಎಂದಿದ್ದಾರೆ.
ಅದೇ ರೀತಿ ಬಹುತ್ವ ಭಾರತವೂ ಸೇರಿದಂತೆ ಅಸಮಾನತೆ ಪರಿಕಲ್ಪನೆ ದೇಶದಿಂದ ದೇಶಕ್ಕೆ ಬದಲಾಗುತ್ತಿರುವ ಈ ಸಮಯದಲ್ಲಿ ನಮಗೆ ಸ್ಥಳೀಯ ಮಟ್ಟದ ತಳಸ್ಪರ್ಶಿಯ ದತ್ತಾಂಶಗಳ ಅವಶ್ಯಕತೆಯಿದೆ. ಈ ಸಂದರ್ಭದಲ್ಲಿ ಲೇಖಕ, ಅಂಕಣಕಾರ ಮತ್ತು ಮಾಧ್ಯಮ ವಿಶ್ಲೇಷಕ ಡಾ. ಅಮ್ಮಸಂದ್ರ ಸುರೇಶ್ ಅವರ “ಅಸಮಾನತೆಯ ಉದಾರಿಕರಣ” ಕೃತಿಯು ಅಸಮಾನತೆಯನ್ನು ನಿರ್ದಿಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಹೇಗೆ ಅರ್ಥೈಸಿಕೊಳ್ಳಬೇಕು ಮತ್ತು ಅದರ ವಿವಿಧ ಆಯಾಮಗಳನ್ನು ಹೇಗೆ ವಿಸ್ತರಿಸಬೇಕು,, ವಿಶ್ಲೇಷಿಸಬೇಕು ಎನ್ನುವುದನ್ನು ವಿವರವಾಗಿ ನಮಗೆ ತಿಳಿಸುತ್ತದೆ ಎಂದು ವಿವರಿಸಿದ್ದಾರೆ.
ನಾಡಿನ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಅಂಕಣಗಳ ರೂಪದಲ್ಲಿ ಬಂದ ಲೇಖನಗಳನ್ನು ಸೇರಿಸಿ ಲೇಖಕರು ಈ ಕೃತಿಯನ್ನು ತಂದಿದ್ದು ಉದಾರೀಕರಣದ ಬೆಳ್ಳಿಹಬ್ಬದ ನಂತರದ ಸಂಕ್ರಮಣದ ಈ ಕಾಲಘಟ್ಟದಲ್ಲಿ ಉದಾರೀಕರಣ ಮತ್ತು ಅಸಮಾನತೆ ಇನ್ನು ಸಹ ಹೇಗೆ ಕಂಡೂ ಕಾಣದೆ ಮುಂದುವರೆಯುತ್ತಿದೆ ಎಂಬುದನ್ನು ಲೇಖಕರು ತಮ್ಮದೇ ಆದ ರೀತಿಯಲ್ಲಿ ಸರಳವಾಗಿ ಹೇಳುತ್ತಾ ಹೋಗಿದ್ದಾರೆ.
©2024 Book Brahma Private Limited.