‘ಬೊಗಸೆಯಲ್ಲೊಂದು ಹೂನಗೆ’ - ನೆನಪುಗಳ ಒಂದು ಸುಂದರ ಲಹರಿ ಲೇಖಕಿ ಅಂಜನಾ ಹೆಗಡೆ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಸೇತುರಾಂ ಮುನ್ನುಡಿ ಬರೆದು ‘ಮೂಲತಃ ಉತ್ತರ ಕನ್ನಡ ಜಿಲ್ಲೆಯ ಈ ಲೇಖಕಿಯ ಬಾಲ್ಯ ಕಳೆದದ್ದು ಕಾಡು, ಗುಡ್ಡ, ನದಿ, ತಿಳಿನೀರ ನಿರಂತರತೆಯ ಝರಿ, ಭೋರ್ಗರೆವ ಜಲಪಾತ, ಧೋ ಎಂದು ಸುರಿವ ಮಳೆ, ಹಾಗೇ ಬಿರುಬಿಸಿಲು, ಸ್ವಾಭಾವಿಕ ವಾತಾವರಣದಲ್ಲಿ ಬೇರು ಕಿತ್ತು ಬದುಕು ಕಟ್ಟಿಕೊಂಡದ್ದು ಬೆಂಗಳೂರೆಂಬ ಭ್ರಮೆಯ ಬೆಂಗಾಡಲ್ಲಿ. ಹಾಗಾಗಿ ಚಂದದ ನೆನಪುಗಳೇನೇ ಇದ್ದರೂ ಬಾಲ್ಯದ್ದು ಮಾತ್ರ, ಎಲ್ಲ ಲೇಖನಗಳಲ್ಲೂ ಬಾಲ್ಯದ ಭಾವಗಳ, ಪಾತ್ರಗಳ ಚಿತ್ರಣವಿದೆ, ಸ್ವಾಭಾವಿಕವೇ, ಬವಣೆಗಳನ್ನೆಂತ ಮೆಲುಕು ಹಾಕುವುದು ಮೆಲುಕುವುದೇನಿದ್ದರೂ ಭಾವಗಳನ್ನೇ ಎನ್ನುತ್ತಾರೆ.
ಈ ಕೃತಿಯಲ್ಲಿ ಬಣ್ಣಗಳಲ್ಲದಿದ್ದ ಬದುಕು, ಕನಸಿನ ಚಾದರ, ಅಜ್ಜನ ಮನೆಯೆನ್ನುವ ಜೀವನಪಾಠ, ಗುಂಡಪ್ಪೆಯ ಮಳೆಗಾಲ, ಜಾಮಿನಿಯ ನೆನಪಿನಲ್ಲಿ, ಬೊಗಸೆಯಲ್ಲೊಂದು ಹೂನಗೆ, ಮಾತು ಅರಳುವ ಹೊತ್ತು, ಉತ್ತಮರ ಸಂಗ ಎನಗಿತ್ತು ಸಲಹೊ, ಕರ್ಟನ್ನಿನ ಮೇಲೊಂದು ಕೇತಕಿ ಹೂವು, ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ, ಹೂವು ಹರಳುವ ಹಾದಿ, ಬಾಗಿಲುಗಳ ಆಚೀಚೆ, ಗೂಡಂಗಡಿಯ ತಿರುವು, ಅಶ್ವತ್ಥಮರದ ಮೇಲೊಂದು ಗುಬ್ಬಿಗೂಡು, ಜಗಲಿಯೆನ್ನುವ ಮೊದಲಪ್ರೇಮ, ಪಾಲಿಸೋ ಹೂವ, ರಾತ್ರಿಬಸ್ಸುಗಳೊಂದಿಗೆ ಮಾತುಕತೆ, ಬಸ್ ಸ್ಟ್ಯಾಂಡೆನ್ನುವ ಮಾಯಾಲೋಕ, ಗ್ರೀಟಿಂಗ್ ಕಾರ್ಡುಗಳ ನೆನಪಿನಲ್ಲಿ, ಹಸಿರು ದುಪ್ಪಟ್ಟಿಯ ಮಡಿಲು, ಬಾಲ್ಯವೆನ್ನುವ ರಾತ್ರಿರಾಣಿಯ ಪರಿಮಳ, ಅರಳಿಸೆನ್ನ ಅಂತರಂಗ ಎಂಬ 22 ಲೇಖನಗಳು ಸಂಕಲನಗೊಂಡಿವೆ.
ಲೇಖಕಿ ಅಂಜನಾ ಹೆಗಡೆ ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವವಿದ್ದು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. "ಕಾಡ ಕತ್ತಲೆಯ ಮೌನಮಾತುಗಳು" ಕವನ ಸಂಕಲನ ಹಾಗೂ "ಬೊಗಸೆಯಲ್ಲೊಂದು ಹೂನಗೆ" ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ. ...
READ MORE