ಲೇಖಕರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹ ’ಮುಸಾಫಿರ್. ತಮ್ಮನ್ನು ತಾವು ಮುಸಾಫಿರ್(ಅಲೆಮಾರಿ) ಎಂದು ಕರೆದುಕೊಳ್ಳುವ ಲೇಖಕ ಸತೀಶ್ ಚಪ್ಪರಿಕೆ ಅವರು ತಮ್ಮ ಅಲೆಮಾರಿತನದಲ್ಲಿ ಕಂಡ ಸಾಮಾನ್ಯರ ಅಸಮಾನ್ಯ ಬದುಕನ್ನು ಅಷ್ಟೇ ಕೌತುಕ ಹುಟ್ಟುವ ಹಾಗೆ ದಾಖಲಿಸಿದ್ದಾರೆ. ಅಲೆಮಾರಿಗೆ ಸದಾ ಹೊಸದನ್ನ ಕಾಣುವ ಹಂಬಲ, ಮಗುವಿನ ಮುಗ್ಧತೆ, ವಿಜ್ಞಾನಿಯೊಬ್ಬನ ಕುತೂಹಲ, ಬೆರಗುಗಣ್ಣುಗಳಿಂದ ಸಮಾಜವನ್ನ ಕಾಣಬಲ್ಲ ವಿಶೇಷ ಮನಸ್ಥಿತಿ ಇರುತ್ತದೆ, ಸಾಮಾನ್ಯರಿಗೆ ಸಾಮಾನ್ಯವೇ ಎನಿಸುವ ಎಷ್ಟೋ ವಿಚಾರಗಳು ಅಲೆಮಾರಿಯೊಬ್ಬನಿಗೆ ಅಸಮಾನ್ಯವಾಗಿ ಕಾಣುವ ಸಾಧ್ಯತೆಗಳಿರುತ್ತವೆ. ಇಂತಹುದೇ ಅಲೆಮಾರಿತನದಲ್ಲಿ ಲೇಖಕ ತಾನು ಕಂಡ ಅದ್ಭುತಗಳನ್ನ ಇಲ್ಲಿನ ಬರಹಗಳಲ್ಲಿ ನೋಡಬಹುದು.
ಪ್ರತೀ ಅಂಕಣವೂ ಓದುಗರ ಆಂತರ್ಯವನ್ನು ಕಲಕುವ ಜೊತೆಗೆ ಲೇಖಕನ ಒಳಗೂ ವಿಶೇಷ ಅನುಭೂತಿಯೊಂದನ್ನ ಉಳಿಸುತ್ತ ಹೋಗಿವೆ. 26 ಮಹನೀಯರ ಅಸಮಾನ್ಯ ಕಥೆಗಳನ್ನು ಅಂಕಣಕ್ಕಾಗಿ ಬರೆಯುವ ಲೇಖಕ ಸತೀಶ್ ಚಪ್ಪರಿಕೆಗೆ ಓದುಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು.
“ಕಲ್ಲುಕುಟಿಗರ ಸೀತು: “ಕಳೀನಬಾಗಿಲಿನ ಯಕ್ಷಗನ್ನಡಿ”, ಬನಾರಸ್ ನಲ್ಲೊಬ್ಬ ಬೆಂಗಳೂರಿನ ‘ಭಗವಾನ್’, ಹಿಮಾಲಯದ ಮಡಿಲಲ್ಲಿ ಸಂತನಾದ ಮೈಕ್ರೋಸಾಫ್ಟಿಗ, ಸೇರಿದಂತೆ ಹಲವು ಲೇಖನಗಳು ಗಮನಸೆಳೆಯುತ್ತವೆ. ಇನ್ನೂ ಗೋಧಾವರಿ ಡಾಂಗೆ ಕುರಿತು ಬದುಕು-ಬರಕ್ಕೆ ಸಡ್ಡು ಹೊಡೆದ ಮರಾಠವಾಡದ ಮಹಾಮಾತೆ ಮತ್ತು ಬೆಜವಾಡ ವಿಲ್ಸನ್ ಕುರಿತಾದ ಕರ್ಮಯೋಗಿಗಳ ಪಾಲಿನ ಜೀವದಾತ ಎಂಬ ಬರಹಗಳು ಜನಮನ ಗೆದ್ದಿದ್ದಿವಲ್ಲದೆ, ಈ ಲೇಖನಗಳಿಂದಾಗಿ ಹಲವು ಮಹನೀಯರಿಗೆ ಪ್ರಶಸ್ತಿ ಪುರಷ್ಕಾರಗಳು ಲಭಿಸಿರುವುದು ವಿಶೇಷ.
©2024 Book Brahma Private Limited.