ನಿಜವಾದ ಬರಹಗಾರ ತನ್ನ ಸುತ್ತಲಿನ ಜೊತೆಗೆ ತನ್ನನ್ನೂ ವಿಮರ್ಶಿಸಿಕೊಳ್ಳುತ್ತಿರುತ್ತಾನೆ. ಅಂತಹ ಬರಹಗಳು ತುಂಬಾ ಪ್ರಾಮಾಣಿಕವಾಗಿರುತ್ತವೆ. ಹಾಗೆ ಪ್ರಾಮಾಣಿಕ ಬರಹದ ಮೂಲಕ ಕಂಗೊಳಿಸುವವರು ಲೇಖಕ ಬಿ.ಎಂ. ಬಷೀರ್. ಅವರು ಪತ್ರಕರ್ತರೂ ಹೌದು. ’ವಾರ್ತಾಭಾರತಿ’ ಪತ್ರಿಕೆಯನ್ನು ಮುನ್ನಡೆಸುತ್ತಿರುವ ಅವರ ಚಿಂತನ ಬರಹಗಳ ಸಂಗ್ರಹ ’ಬಾಡೂಟದ ಜೊತೆಗೆ ಗಾಂಧಿ ಜಯಂತಿ’.
ಲವಲವಿಕೆಯ ಭಾಷೆಯೊಂದಿಗೆ ಗಂಭೀರ ವಿಚಾರಗಳನ್ನೂ ಸರಳವಾಗಿ ದಾಟಿಸಬಲ್ಲ ಅನೇಕ ಲೇಖನಗಳು ಕೃತಿಯಲ್ಲಿವೆ. 28 ವೈವಿಧ್ಯಮಯ ಲೇಖನಗಳು ಕೃತಿಯಲ್ಲಿವೆ. ಅಸಮಾನತೆ, ಶೋಷಣೆ ದಂತಕತೆಗಳ ವೈಭವೀಕರಣದ ಮೂಲಕ ಸವಾರಿ ಮಾಡುವ ಕ್ರಮ ಇತ್ಯಾದಿ ವಿಚಾರಗಳನ್ನು ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕೃತಿಯ ಕುರಿತು ಮಾತನಾಡುತ್ತ ಬಷೀರ್ ಪ್ರಸ್ತಾಪಿಸುವ ವಿಷಯಗಳು ಮಹತ್ವದ್ದೆನಿಸುತ್ತವೆ; ’ನಾವು ಒಬ್ಬಂಟಿಯಾಗಿದ್ದಾಗ ಮನುಷ್ಯರಾಗಿಯೇ ಇರುತ್ತೇವೆ. ಆದರೆ ಸಾರ್ವಜನಿಕವಾಗಿ, ಸಮೂಹವಾಗಿ ಗುರುತಿಸಿಕೊಳ್ಳುವಾಗ ಮೃಗವಾಗಿ ಬಿಡುವ ಅಪಾಯ ಇಂದಿನ ರಾಜಕೀಯ ಸಂದರ್ಭಗಳಲ್ಲಿ ಹೆಚ್ಚುತ್ತಾ ಇದೆ. ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಉನ್ನತ್ತ ವ್ಯಕ್ತಿ ಆಡುವ ಭಾಷಣವನ್ನು ನಿಜವೆಂದೇ ಭಾವಿಸಿ, ಅದನ್ನು ಆವಾಹಿಸಿಕೊಂಡು ಇನ್ನೊಬ್ಬನನ್ನು ದ್ವೇಷಿಸಲು ಹೊರಡುತ್ತೇವೆ. ಈ ದೇಶದ ಎಲ್ಲ ಕೋಮುಗಲಭೆಗಳು ನಡೆದಿರುವುದು ಇಂತಹದೇ ಸಂದರ್ಭಗಳಲ್ಲಿ, ನಾವು ಒಬ್ಬಂಟಿಯಾಗಿದ್ದಾಗ ರಕ್ತಕ್ಕೆ ಅಂಜುತ್ತೇವೆ. ಸಾವಿಗೆ ಮರುಗುತ್ತೇವೆ. ಬರ್ಬರ ಕೊಲೆ ನಡೆದಾಗ ಅಸಹ್ಯ ಪಟ್ಟುಕೊಳ್ಳುತ್ತೇವೆ. ಆದರೆ ಸಮೂಹದೊಂದಿಗೆ ಉನ್ಮತ್ತರಾಗಿರುವಾಗ ಸಣ್ಣ ರಕ್ತ ಹನಿಗೆ ಅಂಜುವ ನಾವು ಒಂದು ಕೊಲೆಯನ್ನೇ ಮಾಡಿ ಬಿಡಬಹುದು. ಈ ಕಾರಣದಿಂದಲೇ ಸಾರ್ವಜನಿಕ ಭಾಷಣಗಳನ್ನು ಆಲಿಸುವಾಗ ಸದಾ ಎಚ್ಚರವಾಗಿರಬೇಕು.
ವೇದಿಕೆಯಲ್ಲಿ ಮಾತನಾಡುವವ ತನ್ನ ಹೃದಯದ ಮಾತುಗಳನ್ನು ಆಡುತ್ತಿಲ್ಲ. ತಾನು ಏನು ಮಾತನಾಡಬೇಕೋ ಅದನ್ನು ಆಡುತ್ತಿಲ್ಲ. ಬದಲಿಗೆ ಸಮೂಹಕ್ಕೆ ಏನು ಬೇಕೋ ಅದನ್ನು ಆಡುತ್ತಿದ್ದಾನೆ ಎಂಬ ಪ್ರಶ್ನೆ ಇಟ್ಟುಕೊಂಡು ಅದನ್ನು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಡಬೇಕು. ನಮ್ಮ ಎದೆಯ ಒಳಗಿನ ಖಾಸಗಿ ಧ್ವನಿಯನ್ನು ಆಲಿಸಲು ಕಲಿಯಬೇಕು. ಸೌಹಾರ್ದ ಯಾವುದೇ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ ಹುಟ್ಟುವಂತಹದ್ದಲ್ಲ. ಅದು ಎರಡು ವ್ಯಕ್ತಿಗಳು ಪರಸ್ಪರರ ಹೃದಯವನ್ನು ಆಲಿಸುವಾಗ ಹುಟ್ಟುವಂಥದ್ದು.
ಈ ಕಾರಣದಿಂದ ನಾವು, ಹೃದಯದ ಧ್ವನಿಯನ್ನು ಆಲಿಸುವುದಕ್ಕೆ ಶುರುಮಾಡೋಣ...’
©2024 Book Brahma Private Limited.