ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಮಠ ಎಂಬ ಊರಿನಲ್ಲಿ ಜನಿಸಿದ ಬಶೀರ್ ಅವರು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದವರು. ಮಂಬಯಿ ಕರ್ನಾಟಕ ಮಲ್ಲ’ ಕನ್ನಡ ದೈನಿಕದಲ್ಲಿ ಐದು ವರ್ಷ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ ಅವರು ನಂತರ ಜನವಾಹಿನಿ’ ಕನ್ನಡ ದಿನಪತ್ರಿಕೆಯಲ್ಲಿ ಐದು ವರ್ಷ ಹಿರಿಯ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಒಂದು ದಶಕಕಕ್ಕೂ ಹೆಚ್ಚು ಕಾಲದಿಂದ ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದಾರೆ. ಗೌರಿ ಲಂಕೇಶ್, ಅಗ್ನಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಪ್ರವಾದಿಯ ಕನಸು (ಕವನ ಸಂಕಲನ-ಮುದ್ದಣ ಕಾವ್ಯ ಪ್ರಶಸ್ತಿ 1996), ಬಾಳೆ ಗಿಡ ಗೊನೆ ಹಾಕಿತು (ಕಥಾಸಂಕಲನ- ಚದುರಂಗ ಪ್ರತಿಷ್ಠಾನ ಪ್ರಶಸ್ತಿ- 2002), ಅಂಗೈಯಲ್ಲಿ ಆಕಾಶ (ಹನಿಕತೆಗಳು- ಲಂಕೇಶ್ ಪ್ರಶಸ್ತಿ 2012)), ಬಾಡೂಟದ ಜೊತೆಗೆ ಗಾಂಧಿ ಜಯಂತಿ (ಅಂಕಣ ಬರಹಗಳು 2013), ಅಮ್ಮ ಹಚ್ಚಿದ ಒಲೆ (ಕವನ ಸಂಕಲನ-2013).