About the Author

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. 

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ಆಫ್ ಬಯಾಲಜಿಕಲ್ ಕಂಟ್ರೋಲ್ ಸಂಸ್ಥೆಯಲ್ಲಿ ಶಾಖೆಯ ಮೇಲ್ವಿಚಾರಕರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ. 1971 ರಿಂದ ನೌಕರಿಗೆ ರಾಜೀನಾಮೆ ನೀಡಿ ವೈಜ್ಞಾನಿಕ ಛಾಯಾಚಿತ್ರಗ್ರಾಹಕರಾಗಿ ಸ್ವತಂತ್ರ ಜೀವನ ನಡೆಸಿದ್ದಾರೆ. ಕೃಷ್ಣಾನಂದ ಕಾಮತರು ಪ್ರವಾಸಕಥನ, ವಿಜ್ಞಾನ, ಜನಾಂಗೀಯ ಅಧ್ಯಯನ, ಕಲೆ, ಪರಿಸರ ಮೊದಲಾದ ವಿಷಯಗಳ ಬಗ್ಗೆ ಪುಸ್ತಕಗಳನ್ನೂ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಕೃಷ್ಣಾನಂದ ಕಾಮತರ ಪತ್ನಿ ಶ್ರೀಮತಿ ಜ್ಯೋತ್ಸ್ನಾ ಕಾಮತ್ ಅವರು ಸಹ ಸಂಶೋಧಕಿ ಹಾಗೂ ಲೇಖಕಿ. 

ಕೃಷ್ಣಾನಂದ ಕಾಮತ್ ಅವರ ಕೃತಿಗಳು- ವಂಗದರ್ಶನ (ಬಂಗಾಲದ ಕುರಿತು), ಪ್ರೇಯಸಿಗೆ ಪತ್ರಗಳು, ಮರುಪಯಣ, ಪತ್ರ-ಪರಾಚಿ, ಭಗ್ನಸ್ವಪ್ನ (ಕಾದಂಬರಿ), ನಾ ರಾಜಸ್ಥಾನದಲ್ಲಿ, ಕಲೆ-ಕಾವಿಕಲೆ, ಅಕ್ಷತ, ಇರುವೆಯ ಇರುವು, The Timeless Theater, ಕಾಗೆಯ ಕಾಯಕ, ಪ್ರವಾಸಿಯ ಪ್ರಬಂಧಗಳು, ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ), 1976 ಒಂದು ವರ್ಷಕಾಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶಿಷ್ಯವೇತನ ಪಡೆದು ಮಧ್ಯಪ್ರದೇಶದಲ್ಲಿ ಗಿರಿವಾಸಿ ಜನಾಂಗಗಳ ಅಧ್ಯಯನ ಮಾಡಿ ಅಲ್ಲಿನ ಬಗ್ಗೆ ಮೂರು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ ಕಾಲರಂಗ, ಬಸ್ತರ ಪ್ರವಾಸ (ಗಿರಿಜನರ ಪರಿಚಯ), ಮಧ್ಯಪ್ರದೇಶದ ಮಡಿಲಲ್ಲಿ

ಜೊತೆಗೆ ಪರಿಸರ, ಪ್ರಾಣಿ, ಸಸ್ಯ ವಿಜ್ಞಾನದ  ಕುರಿತಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಪ್ರಾಣಿಪ್ರಪಂಚ, ಪಶುಪಕ್ಷಿ ಪ್ರಪಂಚ, ಕೀಟ ಜಗತ್ತು, ಸಸ್ಯಪ್ರಪಂಚ, ಸಸ್ಯ ಪರಿಸರ, ಪ್ರಾಣಿ ಪರಿಸರ, ಸರ್ಪಸಂಕುಲ ಮತ್ತು ಅವರ ಪ್ರವಾಸ ಕಥನ- ನಾನೂ ಅಮೆರಿಕೆಗೆ ಹೋಗಿದ್ದೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ , ಟಿ.ಎಂ.ಎ.ಪೈ ಪ್ರತಿಷ್ಠಾನ ವಿಶೇಷ ಬಹುಮಾನ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳು ಲಭಿಸಿವೆ. 

ಕೃಷ್ಣಾನಂದ ಕಾಮತ್

(29 Sep 1934-20 Feb 2002)

Awards