ಲೇಖಕ, ಅಂಕಣಕಾರ ಯೋಗೀಂದ್ರ ಮರವಂತೆ ಅವರು ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮದವರು. ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ "ಏರ್ ಬಸ್" ಕಂಪನಿಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿರುವ ಅವರು ಬ್ರಿಟನ್ನಿನ ಜೀವನಾನುಭವಗಳನ್ನು ಅಂಕಣಗಳಾಗಿ ಪ್ರಬಂಧಗಳಾಗಿ ಕನ್ನಡದ ಪತ್ರಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಸುಧಾ ವಾರಪತ್ರಿಕೆಯ 2019 ಹಾಗು 2021ರ ಯುಗಾದಿ ಸ್ಪರ್ಧೆಗಳಲ್ಲಿ ಇವರ ಪ್ರಬಂಧಗಳು ಬಹುಮಾನ ಪಡೆದಿವೆ. ವಿಮಾನ ಲೋಕದ ಅಚ್ಚರಿ ಅನುಭವಗಳ ಸರಣಿ "ಏರೋ ಪುರಾಣ" ನಿಯಮಿತವಾಗಿ "ಬುಕ್ ಬ್ರಹ್ಮ" ತಾಣದಲ್ಲಿ ಪ್ರಕಟಗೊಳ್ಳುತ್ತಿದೆ.
"ಲಂಡನ್ ಡೈರಿ - ಅನಿವಾಸಿಯ ಪುಟಗಳು" ಮೊದಲ ಸಂಕಲನ, ಕನ್ನಡ ಸಾಹಿತ್ಯ ಪರಿಷತ್ ಇಂದ 2019ರ "ರತ್ನಾಕರ ವರ್ಣಿ -ಮುದ್ದಣ ದತ್ತಿ ಪ್ರಶಸ್ತಿ" ಪಡೆದಿದೆ.
ರಾಷ್ಟ್ರ,ಮಟ್ಟದಲ್ಲಿ ಸುದ್ದಿ ಮಾಡಿದ ಮರವಂತೆ ಗ್ರಾಮಪಂಚಾಯಿತಿಯ ಮಾದರಿ ಕೆಲಸಗಳನ್ನು ದಾಖಲೀಕರಿಸಲು "ಬನ್ನಿ ಮರವಂತೆಗೆ " (Welcome to Maravanthe ) ಸಾಕ್ಷ್ಯಚಿತ್ರವನ್ನು ಕಲ್ಪಿಸಿ ಚಿತ್ರೀಕರಿಸಿದ್ದಾರೆ. ಯಕ್ಷಗಾನದ ಬಣ್ಣದ ಮನೆಯ ಆಗುಹೋಗುಗಳನ್ನು "ಚೌಕಿಮನೆ" (Chowkimane) ಸಾಕ್ಷ್ಯಚಿತ್ರದಲ್ಲಿ ದಾಖಲಿಸಿದ್ದಾರೆ. ಇವೆರಡೂ ಸಾಕ್ಷ್ಯ ಚಿತ್ರಗಳು ಯೂಟ್ಯೂಬ್ ಅಲ್ಲಿ ಲಭ್ಯ ಇವೆ. ಬ್ರಿಟನ್ನಿನಲ್ಲಿ ಯಕ್ಷಗಾನದ ಚಿಕ್ಕ ತಂಡವನ್ನು ಕಟ್ಟಿಕೊಂಡು ಹಲವು ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾರೆ ,ಕಾರ್ಯಾಗಾರ ನಡೆಸುತ್ತಾರೆ. ಹುಟ್ಟೂರಿಗೆ ಭೇಟಿ ನೀಡಿದಾಗ ವೃತ್ತಿಪರ ಕಲಾವಿದರ ಜೊತೆಗೂ ಯಕ್ಷಗಾನದಲ್ಲಿ ಭಾಗವಹಿಸುತ್ತಾರೆ. ಅವರ ಮತ್ತೊಂದು ಅನುಭವ ಕಥನ ‘ಮುರಿದ ಸೈಕಲ್, ಹುಲಾ ಹೂಪ್ ಹುಡುಗಿ’ ಪ್ರಕಟಣೆ ಹಂತದಲ್ಲಿದೆ.