ಪ್ರೊ. ಸಣ್ಣರಾಮ ಅವರು 1954 ಮೇ 03 ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ಕೋಟಿಪುರ ತಾಂಡದಲ್ಲಿ ಜನಿಸಿದರು. ಅಕ್ಷರಲೋಕದ ಪರಿಚಯವಿಲ್ಲದ ಕುಟುಂಬದಿಂದ ಬಂದ ಸಣ್ಣರಾಮ, ಎಂ. ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದಲೂ, ಪಿಹೆಚ್.ಡಿ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ಪಡೆದರು. ಒಟ್ಟು 35 ವರ್ಷಗಳು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ಧಾರೆ.
ಸುದೀರ್ಘ ಸೇವಾವಧಿಯಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಲ್ಲಿ ಕ್ರಿಯಾಶೀಲರಾಗಿದ್ದ ಸಣ್ಣರಾಮ ಅವರು 13 ಜನ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಹೆಚ್‍ಡಿ ಪದವಿ, 4 ಜನ ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ ಮಾರ್ಗದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಣ್ಣರಾಮ ಬರಹಗಾರರು ಮಾತ್ರವಲ್ಲ; ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನ ಜಾಗೃತಿ ಮೂಡಿಸಲು ರಾಜ್ಯದ ಅನೇಕ ಕಡೆ ಸಂಚರಿಸಿ ಅಂಬೇಡ್ಕರ್ ಅವರ ತಾತ್ವಿಕ ಚಿಂತನೆ ಕುರಿತು ಅನೇಕ ಉಪನ್ಯಾಸ ನೀಡುತ್ತಾ ಬಂದಿದ್ದಾರೆ.
ಕೆಮ್ಮಾವು (2002), ಕಾಮದಹನ(2007), ಕಾಯುತ್ತಿದ್ದಾರೆ (2011) ಪ್ರಮುಖ ಕಥಾ ಸಂಕಲನಗಳು. ‘ಅಳು ನುಂಗಿ ನಗು ಒಮ್ಮೆ’ ಅವರ ಆತ್ಮ ಕಥನ ಪ್ರೀತಂ ಪ್ರಕಾಶನದಿಂದ 2011ರಲ್ಲಿ ‘ಜಡತೆ ಮತ್ತು ಚಲನೆ, ವಿಷವೃಕ್ಷ ಮತ್ತು ಆನಂದಮಠ, ಡಾ.ಅಂಬೇಡ್ಕರ್ ಮತ್ತು ಮೀಸಲಾತಿ’ ಅವರ ವಿಚಾರ ಕೃತಿಗಳು. ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಲಂಬಾಣಿ ಗಾದೆಗಳು, ಲಂಬಾಣಿ ಒಗಟು ಲೋಕ, ಲಂಬಾಣಿಗಳು, ಲಂಬಾಣಿ- ಸಂಸ್ಕೃತಿ, ಬುಡಕಟ್ಟು ಸಂಸ್ಕೃತಿ, ಆವೋ ಗೋರ್ ಅಪಣ್ ಓದಾ’ ಅವರ ಪ್ರಮುಖ ಕೃತಿಗಳು.