ಡಾ. ಉಮಾದೇವಿ ಆರ್. ದಂಡೋತಿ (ಮಟ್ಟಿ) ಅವರ ಸಂಶೋಧನಾ ಮಹಾಪ್ರಬಂಧ-ಶೂದ್ರ ವಚನಕಾರ್ತಿಯರು. 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಇಡೀ ಜಗತ್ತಿನಲ್ಲೇ ವಿಶಿಷ್ಟವಾದದ್ದು. ಜಡ್ಡುಗಟ್ಟಿದ ಸಮಾಜ ವ್ಯವಸ್ಥೆಯನ್ನೇ ಅಲುಗಾಡಿಸಿ, ಹೊಸ ಮೌಲ್ಯಗಳನ್ನು ನೀಡಿತು. ಬಸವಣ್ಣ,ಚನ್ನಬಸವಣ್ಣ,ಪ್ರಭುದೇವರಂಥ ವಿಶ್ವ ವಿಭೂತಿ ಪುರುಷರ ನೇತೃತ್ವದಲ್ಲಿ ನಡೆದ ಈ ಅಂದೋಲನ, ಕಾಯಕ-ದಾಸೋಹ, ಗುರು-ಲಿಂಗ-ಜಂಗಮದಂತಹ ಪರಿಕಲ್ಪನೆಗಳನ್ನು ನೀಡುವ ಮೂಲಕ ಸಾಮಾನ್ಯ ಜನರ ಸಾಮಾಜಿಕ ವ್ಯವಸ್ಥೆಯಲ್ಲಿ ಜಾಗೃತಿಯನ್ನು ಮೂಡಿಸಿತು. ಸಾಮಾಜಿಕ ಶೋಷಣೆ ಸೇರಿದಂತೆ ಎಲ್ಲ ವಲಯಗಳಲ್ಲಿಯ ಶೋಷಣೆಗಳನ್ನು ಅಂತ್ಯವಾಗಿಸಲು ಪ್ರಯತ್ನಿಸಿತು. ಎಲ್ಲಕ್ಕೂ ಮೇಲಾಗಿ 'ಪರವಧುವನು ಮಹಾದೇವಿಯೆಂಬೆ ' 'ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ 'ಎಂಬ ಅಮರವಾಣಿ ಶರಣರ ಯುಗದಲ್ಲಿ ಹೊರಹೊಮ್ಮಿ ಕೃತಿಗಿಳಿಯಿತು. "ಅಂಗದ ಮೇಲೆ ಲಿಂಗಯಿದ್ದವರೆಲ್ಲ ರನ್ನು ಸಂಗಮನಾಥ" ಎಂದು ಕಾಣುವ ಬಸವಣ್ಣನವರ ದಿವ್ಯದೃಷ್ಟಿಯಲ್ಲಿ ಸ್ತ್ರೀತ್ವದ ಉದ್ದಾರವಾಯಿತು. ಅಂದಿನ ಸಮಾಜದಲ್ಲಿ ಧೋರಣೆಯಲ್ಲಿ ಸ್ತ್ರೀಯ ಸ್ಥಾನವು ಅತ್ಯಂತ ಕೆಳಮಟ್ಟದಲ್ಲಿದೆ.ಸಮಾಜದ ಅನಿಷ್ಟಕರ ಸಂಕೋಲೆ ಗಳನ್ನು ತೊಡೆದುಹಾಕಕು ಯತ್ನಿಸಿತು. ಶಿವಶರಣರ ಈ ಕ್ರಾಂತಿಯಲ್ಲಿ ಅನೇಕ ಜನ ಶಿವಶರಣೆಯರು ಅವತರಿಸುವುದು ಒಂದು ವಿಶೇಷವೆಂದು ಹೇಳಬಹುದು. ಮುಕ್ತಾಯಕ್ಕ, ಅಕ್ಕಮಹಾದೇವಿ,ಸತ್ಯಕ್ಕ, ಕಾಳವ್ವೆ, ಲಕ್ಕಮ್ಮರಂತಹ ಶಿವಶರಣೆಯರ ವ್ಯಕ್ತಿತ್ವ ಶಬ್ದಕ್ಕೆ ನಿಲುಕುವಂಥದ್ದು. ಪ್ರಭುದೇವರಂತಹ ಮಹಾನ್ ವ್ಯಕ್ತಿಯ ಕೂಡ ಅವಕ್ಕಾಗಿ ಬಿಡುವಷ್ಟು ಈ ಶಿವಶರಣೆಯರ ಹಿರಿಮೆ ಇತ್ತು. ಕನ್ನಡನಾಡಿನ ಮೂಲೆಮೂಲೆಗೂ ಶಿವಶರಣ,ಶರಣೆಯರು ಜಿಡ್ಡುಗಟ್ಟಿದ ಸಮಾಜದಿಂದ ಹೊರಬಂದು ಸಾಮಾಜಿಕ ಜಾಗೃತಿ ಮೂಡಿಸಿದರು. ಇಂತಹ ಅರ್ಥಪೂರ್ಣ ಹೇಳಿಕೆಗಳು ವಚನಕಾರ್ತಿಯರ ಶುದ್ಧ ಬದುಕಿಗೆ ಕನ್ನಡಿ ಹಿಡಿಯುತ್ತವೆ. ನುಡಿಯಲ್ಲಿ ಒರಟುತನ ಕಂಡರೂ ಮನದಲ್ಲಿ ನೇರ ಪರಿಶುದ್ಧ ಸ್ವಭಾವ ನೆಲೆಗೊಂಡಿದೆ. "ಶೂದ್ರ ವಚನಕಾರ್ತಿಯರು" ಎಂಬ ಈ ಮಹಾಪ್ರಬಂಧದ ಕೃತಿಯಲ್ಲಿ ಶಿವಶರಣೆಯರು ಅಂದರೆ ಶೂದ್ರ ವಚನಕಾರ್ತಿಯರ ಧಾರ್ಮಿಕ ಹಾಗೂ ಸಾಮಾಜಿಕ ಆಂದೋಲನದ ಸಮಗ್ರ ಅಧ್ಯಯನವನ್ನು ಕೈಗೊಂಡಿದ್ದರೂ ಇದರಲ್ಲಿ ಮುಖ್ಯವಾಗಿ ಅಂದೋಲನದ ಕಾರಣಕರ್ತರೂ ಅನಧಿಕೃತ ಆಚಾರ ಪುರುಷರು ಎನಿಸಿರುವ ಅಸ್ಪೃಶ್ಯರು ಹಾಗೂ ಶೂದ್ರರಾದ ಶಿವಶರಣೆಯರನ್ನು ಆಯ್ಕೆಮಾಡಿಕೊಂಡು ಅದಕ್ಕೊಂದು ಸ್ಪಷ್ಟವಾದ ಚೌಕಟ್ಟು ನಿರ್ಮಿಸಿ ಕೊಳ್ಳಲಾಗಿದೆ. ಇದರಲ್ಲಿ ಹೆಚ್ಚಾಗಿ ಬಸವಯುಗದ ಶರಣೆ ಯರೇ ಆಗಿದ್ದಾರೆ. ಅಲ್ಲದೆ ಶೂದ್ರ ವಚನಕಾರ್ತಿಯರ ಜೀವನ ಸಾಧನೆ ಹಾಗೂ ಅವರ ವಚನಗಳ ಮೌಲ್ಯ ವಿವೇಚನೆಯನ್ನು ಪ್ರತ್ಯೇಕವಾಗಿ ಶೂದ್ರ ವಚನಕಾರ್ತಿಯರ ಪರಂಪರೆ, ಇತರ ಕವಿಗಳ ದೃಷ್ಟಿಯಲ್ಲಿ ವಚನಕಾರ್ತಿಯರು, ವಚನಕಾರ್ತಿಯರ ಸ್ಮಾರಕಗಳು, ಶೂದ್ರ ವಚನಕಾರರ ವಚನಗಳ ಅಧ್ಯಯನ, ಶೂದ್ರ ವಚನಕಾರ್ತಿರು ಮತ್ತು ಇತರ ಭಕ್ತಿಪಂಥದ ಕವಿಯಿತ್ರಿಯರು, ಶೂದ್ರ ವಚನಕಾರರ ಕೊಡುಗೆ,ಹೀಗೆ ಏಳು ಅಧ್ಯಯಗಳಾಗಿ ವಿಂಗಡಿಸಿಕೊಂಡು, ಸಂಶೋಧನಾ ಪ್ರಬಂಧವನ್ನು ರಚಿಸಿ ಕೃತಿರೂಪ ನೀಡಲಾಗಿದೆ.
©2024 Book Brahma Private Limited.