‘ಸಮಕಾಲೀನ’ ಚಂದ್ರಕಾಂತ ವಡ್ಡು ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; “ಈಗಿರುವ ರಾಜಕೀಯ ಪಕ್ಷಗಳಿಗೆ, ವ್ಯಕ್ತಿಗಳಿಗೆ, ಶೈಲಿಗೆ, ಶಕ್ತಿಗೆ `ಪರ್ಯಾಯ' ಎಂಬುದು ಪ್ರಸ್ತುತ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಅಂತಹದೊಂದು ಪರ್ಯಾಯವನ್ನು ರೂಪಿಸುವ, ಜೊತೆಜೊತೆಗೇ ಜನರನ್ನು ಬದಲಾವಣೆಗೆ ಸಿದ್ಧಗೊಳಿಸುವ ಕಾರ್ಯ ಆಗಬೇಕಿದೆ. ಜನತೆಗೆ ಬೇಕಿರುವುದು ಭ್ರಷ್ಟ ವ್ಯವಸ್ಥೆಗೆ ಪ್ರತಿರೋಧ ಒಡ್ಡುವ ಸಾಚಾ ಪರಿಹಾರವೇ ಹೊರತು ಅಸ್ತಿತ್ವದಲ್ಲಿ ಇರುವ ಸಿದ್ಧ ಮಾದರಿಗೆ ಶುದ್ಧತೆಯ ಬಣ್ಣ ಲೇಪಿಸಿದ ಮತ್ತೊಂದು ಮುಖವಲ್ಲ. ಇದು ಸಾಧ್ಯವಾಗುವುದು ನೈತಿಕ ನೆಲೆಯ ಪ್ರತಿ ರಾಜಕಾರಣದಿಂದ ಮಾತ್ರ''. ಈ ನಂಬಿಕೆ, ನಿಲುವು ಈ ಸಂಕಲನದ ಎಲ್ಲ ವಿಶ್ಲೇಷಣೆಗಳ ತಳಹದಿ ಅನ್ನಿಸಿತು. ಚಂದ್ರಕಾಂತ ವಡ್ಡು ಅವರ ಈ ಬರಹಗಳಲ್ಲಿ ನಮ್ಮ ಮುಖ್ಯವಾದ ಸಂಸ್ಥೆಗಳ, ಗಣ್ಯ, ಮಾನ್ಯ, ನಾಯಕರ ವರ್ತನೆಯ, ಘಟನೆಗಳ ವ್ಯಾಖ್ಯಾನಗಳಿವೆ, ನಮ್ಮ ಕಾಲಕ್ಕೆ ಅಗತ್ಯವಾದ ಆದರ್ಶಗಳನ್ನು ನಂಬಿ ಬದುಕಿದ ವ್ಯಕ್ತಿತ್ವಗಳ ಚಿತ್ರಣವೂ ಇದೆ.
ಇದು ಅಹಿತ, ಇದು ಹಿತ, ಇದು ಅಸ್ವಸ್ಥ, ಇದು ಸ್ವಸ್ಥ ಎಂಬುದನ್ನು ಈ ಬರಹಗಳು ಸ್ಪಷ್ಟವಾಗಿ ತೋರುತ್ತವೆ. ವಿಧಾನಸಭೆ, ಸಾಹಿತ್ಯ ಪರಿಷತ್ತು, ತನಿಖಾ ಸಂಸ್ಥೆಗಳು ಸತ್ವಹೀನವಾಗುತ್ತಿರುವ ಬಗ್ಗೆ ವಿಷಾದವಿದೆ, ಸಿಟ್ಟೂ ಇದೆ. ಶಾಸಕರ, ಅಧಿಕಾರಿಗಳ ವರ್ತನೆ ಹೇಗಿರಬೇಕಿತ್ತು, ಹೇಗಿಲ್ಲ ಅನ್ನುವುದರ ಚಿತ್ರಣಗಳಿವೆ. ಹಿಜಾಬ್ ಘಟನೆ, ಗಣ್ಯರ ಅಂತ್ಯಸಂಸ್ಕಾರ, ಕರೋನದಂಥ ದುರಂತಗಳ ಸಮಯದಲ್ಲಿ ನಾವು ಸಮುದಾಯವಾಗಿ ನಡೆದುಕೊಂಡ ಬಗ್ಗೆ ಅವಲೋಕನವಿದೆ. ಈ ಎಲ್ಲ ಬರಹಳ ಹಿಂದೆಯೂ ನಮ್ಮ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವ ಆತಂಕ, ಹದುಳದ ಕಲ್ಪನೆಯಿರದ ರಾಜಕೀಯದ ಬಗ್ಗೆ ನೋವು, ಅಸಮ್ಮತಿ ಶ್ರುತಿಯಾಗಿವೆ. “ಅದೇ ಸದನ, ಹೆಚ್ಚುಕಮ್ಮಿ ಅವರೇ ಸದಸ್ಯರು, ಅವೇ ಸಮಸ್ಯೆಗಳು, ಅವೇ ಮಾತುಗಳು, ಅವೇ ಬಾಯಿಗಳು, ಆದರೆ ಬದಿಗಳು ಮಾತ್ರ ಬೇರೆ ಬೇರೆ. ಅಲ್ಲಿದ್ದಾಗ ಆ ಮಾತು, ಇಲ್ಲಿದ್ದಾಗ ಈ ಮಾತು. ಅಷ್ಟೇ ವ್ಯತ್ಯಾಸ.
ಯಾವುದೋ ಪದಬಳಕೆ, ಹೀಯಾಳಿಕೆ ನೆಪದಿಂದ ವಿರೋಧ ಪಕ್ಷ ಸಭಾತ್ಯಾಗ ಮಾಡುವುದು...ಸರ್ಕಾರ ಚರ್ಚೆಯಿಲ್ಲದೆ ತನ್ನಿಷ್ಟಕ್ಕೆ ಮಸೂದೆಗಳನ್ನು ಮಂಡಿಸಿ ಒಪ್ಪಿಗೆ ಪಡೆಯುವುದು ಏನನ್ನು ತೋರಿಸುತ್ತದೆ? ಇದೊಂಥರಾ ಅಲಿಖಿತ ಒಡಂಬಡಿಕೆ ಎಂದೆನ್ನಿಸುವುದಿಲ್ಲವೇ?''. ಈ ಮಾತು ಎಲ್ಲರ ಮನಸಿನ ಮಾತೂ ಆಗುತ್ತದೆ. ವಡ್ಡು ಅವರ ಈ ವಿಶ್ಲೇಷಣೆಯ ಬರಹಗಳು ಹೀಗೆ ‘ಸಾಮಾನ್ಯ’ರೆಂದು ಅಸಡ್ಡೆಗೆ ಒಳಗಾಗಿರುವ ಜನರ ಮನಸಿನ ಮಾತುಗಳ ಪ್ರತಿಬಿಂಬವೇ ಆಗಿದೆ. ಅವರು ನಡೆಸಿದ ಸೌಹಾರ್ದ ಕರ್ನಾಟಕದಂಥ ಪ್ರಯೋಗ, ಸಮಾಜಮುಖಿಯಂತಹ ಗಂಭೀರ ಮಾಸಪತ್ರಿಕೆಯ ಮೂಲಕ ಕನ್ನಡದ ಅರಿವನ್ನು ಹೆಚ್ಚಿಸಲು ಮಾಡುತ್ತಿರುವ ಕೆಲಸ ಮುಖ್ಯವಾದದ್ದು. ಅವರ ಬರವಣಿಗೆಯಲ್ಲಿ ಸಾಹಿತ್ಯಕ ಸ್ಪರ್ಶ ಇನ್ನಷ್ಟು ಇರಬೇಕಿತ್ತು ಅನಿಸಬಹುದು. ಆದರೂ ಬರವಣಿಗೆಯಲ್ಲಿ ಕಾಣುವ ಸ್ಪಷ್ಟತೆ, ಅಪಾರ್ಥಕ್ಕೆ ಎಡೆಗೊಡದ ಶೈಲಿ, ಸ್ವಸ್ಥ ಸಮಾಜವನ್ನು ರೂಪಿಸಲು ಸಾಧ್ಯವೆಂಬ ಭರವಸೆ, ಹದಗೆಟ್ಟ ಬದುಕಿನ ರೀತಿಯ ಬಗ್ಗೆ ನೋವು ಇವು ಓದುಗರ ಮನಸಿನಲ್ಲಿ ವಿಚಾರದ ಅಲೆಗಳನ್ನು ಎಬ್ಬಿಸುತ್ತವೆ.
ಸಂವೇದನೆಗಳನ್ನೇ ಕಳೆದುಕೊಂಡ ಸಮಾಜ ಅನ್ನಿಸುತ್ತಿರುವಾಗ ಒಳ್ಳೆಯ ನಾಳಿನ ಭರವಸೆಯನ್ನು ಕಳೆದುಕೊಳ್ಳದೆ ಇಂದಿನ ಹತಾಶೆ ನಿರಾಶೆಗಳನ್ನು ಮುಚ್ಚುಮರೆಯಿಲ್ಲದೆ ಚಿತ್ರಿಸುವುದು ವಡ್ಡು ಅವರ ಬರಹಗಳ ಮುಖ್ಯ ಗುಣವಾಗಿ ನನಗೆ ಕಂಡಿದೆ ಎನ್ನುತ್ತಾರೆ ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ.
©2024 Book Brahma Private Limited.