'ಸಹಕಾರಸಿರಿ ಎಸ್.ಎಂ. ಲಿಂಗಪ್ಪ' ಜೀವನ ಚರಿತ್ರೆ ಕೃತಿಯನ್ನು ಲೇಖಕ ಶ್ಯಾಮೇಶ್ ಅತ್ತಿಗುಪ್ಪೆ ಅವರು ರಚಿಸಿದ್ದಾರೆ. ಈ ಕೃತಿಗೆ ಜಿ. ಮಾದೇಗೌಡ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 'ಎಸ್.ಎಂ. ಲಿಂಗಪ್ಪನವರದ್ದು ಆದರ್ಶ ವ್ಯಕ್ತಿತ್ವ. ತಪ್ಪು ಕಂಡರೆ ಅವರನ್ನು ಅಲ್ಲೇ ಖಂಡಿಸುವ ಸ್ವಭಾವ ಅವರದು. ಈ ಕಾರಣದಿಂದಲೇ ಅವರನ್ನು ಕಂಡರೆ ಜನರಲ್ಲಿ ಭಯ ಮಿಶ್ರಿತ ಗೌರವದ ಭಾವನೆಯಿತ್ತು. ಅಲ್ಲದೆ, ಅವರೊಂದಿಗೆ ಮಾತನಾಡಲು ಮುಖ್ಯಮಂತ್ರಿ, ಹಿಂಜರಿಯುತ್ತಿದ್ದರು. ಅವರ ವ್ಯಕ್ತಿತ್ವವೇ ಅಂತಹದ್ದು ಅವರ ಮಾತಿಗೆ ಬಹಳ ಮನ್ನಣೆಯಿತ್ತು. ಅವರು ಲೋಕಕಲ್ಯಾಣಕ್ಕೆ ಮಾತ್ರ ಬೆಂಬಲ ನೀಡುತ್ತಿದ್ದರು ಎಂದಿದ್ದಾರೆ ಮಾದೇಗೌಡರು. ಜೊತೆಗೆ ಸ್ವಾರ್ಥ, ಸ್ವಜನ ಪಕ್ಷಪಾತ ಅವರಿಗೆ ಇರಲಿಲ್ಲ. ಇಂತಹ ಮೇರು ವ್ಯಕ್ತಿತ್ವದ ಲಿಂಗಪ್ಪನವರನ್ನು ನಾನು ರಾಜಕೀಯ ಗುರುವಾಗಿ ಸ್ವೀಕರಿಸಿದ್ದ ಕನಕಪುರದ ಕಾನಕಾನಹಳ್ಳಿ ಕರಿಯಪ್ಪ ನವರು ಹಾಗೂ ಲಿಂಗಪ್ಪನವರು ತಮ್ಮ ಜೀವಿತದ ಕೊನೆಯ ದಿನಗಳವರೆಗೂ ತಾವೇ ಬೆಳೆಸಿದ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆದಿದ್ದು ವಿಶೇಷ. ಇವರಿಬ್ಬರಲ್ಲೂ ಇರುವ ಸಾಮ್ಯತೆಯೆಂದರೆ ಇಬ್ಬರಿಗೂ ಮಂತ್ರಿಯಾಗುವ ಅವಕಾಶ ಸಿಕ್ಕರೂ ಒಲ್ಲೆಯೆಂದುಬಿಟ್ಟರು. ಇವರು ರಾಜಕೀಯ ಪ್ರವೇಶ ಮಾಡಿದ ಸಂದರ್ಭ ಅಷ್ಟೇನೂ ಸರಳವಾಗಿರಲಿಲ್ಲ. ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರಿಂದ ಜನರಲ್ಲಿ ನಾವೆಲ್ಲರೂ ಸ್ವತಂತ್ರರು, ಯಾರ ಮಾತನ್ನೂ ಹೇಳಬೇಕಾದ ಅಗತ್ಯವಿಲ್ಲ ಎಂಬ ಭಾವನೆ ದಟ್ಟವಾಗಿತ್ತು. ಇಂತಹವರೊಂದಿಗೆ ಸಮನ್ವಯ ಸಾಧಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಭದ್ರಬುನಾದಿ ಹಾಕಿದ್ದು, ನಿಜಕ್ಕೂ ಇವರ ಹೆಚ್ಚುಗಾರಿಕೆ ಎಂತಲೇ ಹೇಳಬಹುದು. ಇಂತಹವರ ನಡೆ ನುಡಿ, ಗುಣ ನಡವಳಿಕೆ ಇವತ್ತಿನ ರಾಜಕಾರಣಿಗಳಿಗೆ ಆದರ್ಶವಾಗಬೇಕಿತ್ತು ಎಂದು ತಿಳಿಸಿದ್ದಾರೆ.
ಕೃತಿಯಲ್ಲಿ 'ಗ್ರಾಮ ಪರಿಸರ', 'ಪೂರ್ವಿಕರು', 'ಬಾಲ್ಯ ಜೀವನ- ವಿದ್ಯಾಭ್ಯಾಸ', 'ಶೈಕ್ಷಣಿಕ ಹರಿಕಾರ', 'ಸಹಕಾರ ಸಿರಿ', 'ಒಕ್ಕಲಿಗರ ಹಾಸ್ಟೆಲಿನ ಆತ್ಮ', 'ರಾಜಕೀಯ ಏಳು-ಬೀಳು', 'ಸಂಸದೀಯ ಪಟು', 'ವಿಶಿಷ್ಟ ವ್ಯಕ್ತಿತ್ವ', 'ನಿಷ್ಠುರವಾದಿ', 'ನೆನಪಿನಾಳದಿಂದ ಎಸ್.ಎಂ. ಲಿಂಗಪ್ಪ', ಹಾಗೂ ಉಪಸಂಹಾರ ಗಳು ಸಂಕಲನಗೊಂಡಿವೆ.
©2024 Book Brahma Private Limited.