ಲೇಖಕ ಕೆ. ವಿ. ಸುಬ್ಬಣ್ಣ ಅವರು ಬರೆದ ಕನ್ನಡದ ಕವಿ ಕುವೆಂಪು ಅವರ ಜೀವನ ಚರಿತ್ರೆ. ‘ಕುವೆಂಪುಗೆ ಪುಟ್ಟ ಕನ್ನಡಿ.’ ಪುಸ್ತಕದ ಬಗ್ಗೆ ಲೇಖಕರು, “ನನ್ನ ಕಣ್ಣು ಹರಳ ಕಿರುಕನ್ನಡಿಯಲ್ಲಿ ಬಿಂಬಿಸಿದ ಕುವೆಂಪು ಅವರ ಚಿತ್ರ ಚೂರುಗಳನ್ನು ಇಲ್ಲಿ ಪೋಣಿಸುತ್ತ ಬಂದಿದ್ದೇನೆ” ಎಂದು ಹೇಳಿದ್ದಾರೆ. ಇನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯು ಮುನ್ನುಡಿಯಲ್ಲಿ, ಈ ಚಿತ್ರ ಚೂರುಗಳಲ್ಲಿ ಈವರೆಗೆ ಬೇರೆಡೆಗೆ ಮೂಡಿಬರದ ಕುವೆಂಪು ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಅನನ್ಯ ಚಿತ್ರ ಮೂಡಿಬಂದಿದೆ. ಚಿಕ್ಕ ಕ್ಯಾನ್ವಾಸಿನಲ್ಲಿ ಸಮಗ್ರತೆಯನ್ನು ಅರಳಿಸಿದ್ದು ಅದ್ಭುತ ಮತ್ತು ಅಷ್ಟೇ ಕಲಾತ್ಮಕವಾದುದು. ‘ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ – ಕರಸ್ಥಲಕ್ಕೆ ಬಂದು ಚಳುಕಾದಿರಯ್ಯಾ’ ಎಂಬ ವಚನ ನೆನಪಾಗುತ್ತದೆ. ಇದು ಡೈರಿಯಲ್ಲ, ವಿನೂತನ ಬರವಣಿಗೆ. ಹರಿಗಡೆಯದೆ ರೂಪುಗೊಳ್ಳುತ್ತ ಬರುವ ಹಾರಕ್ಕೆ ಅಲ್ಲಲ್ಲಿ ಸೌಂದರ್ಯವರ್ಧನೆಗೆ ಕಟ್ಟಿದ ಹವಳಗಳಂತೆ ವಾರಗಳು ನಮೂದಾಗಿವೆ. ಕುವೆಂಪು ಬದುಕು-ಬರಹದ ಅನೇಕ ಹೊಸ ವಿಚಾರಗಳೂ ಒಳನೋಟಗಳೂ ಇಲ್ಲಿವೆ. ಇದು ಆತ್ಮೀಯ ಬರಹವೂ ಹೌದು, ವಿಶ್ಲೇಷಣೆಯೂ ಹೌದು, ವಿಮರ್ಶೆಯೂ ಹೌದು. 20ನೆಯ ಶತಮಾನದಲ್ಲಿ ಭಾರತದಲ್ಲಿ ಜಾಗತಿಕ ವಿಚಾರಗಳಿಗೆ, ಹೋರಾಟಗಳಿಗೆ, ಜನಪರ ನಿಲುವುಗಳಿಗೆ ಕುವೆಂಪು ನೀಡಿದ ಕೊಡುಗೆಯ ಸ್ಪಷ್ಟ ತಿಳುವಳಿಕೆ ನಾವು ಮೊದಲಿಗೆ ಪಡೆಯುವುದು ಸುಬ್ಬಣ್ಣನವರ ಈ ಪುಸ್ತಕದಲ್ಲಿಯೇ.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MORE