ಕೇರಳದಲ್ಲಿ ದಲಿತ ಚಳವಳಿಯನ್ನು ರೂಪಸಿದ ಮೊದಲಿಗ ಅಯ್ಯನ್ ಕಾಳಿ. ಇಂತಹ ಕೆಲವು ಮಂದಿ ಸೇರಿ ಇಡೀ ಭಾರತದಲ್ಲಿ ದಲಿತ ಚಿಂತನ ಧಾರೆ ಹುಟ್ಟುವಂತೆ ಮಾಡಿದರು. ಪುಸ್ತಕದ ಮೂಲ ಲೇಖಕ ಚೆಂದರಾಶೇರಿ. ಇದನ್ನು ತೆಲುಗಿಗೆ ಅನುವಾದಿಸಿದ್ದು ಅಲ್ಲಂ ನಾರಾಯಣ. ತೆಲುಗಿನಿಂದ ಕನ್ನಡಿಸಿದ್ದು ಬಿ. ಸುಜ್ಞಾನಮೂರ್ತಿ. ಕೃತಿಯ 23 ಅಧ್ಯಾಯಗಳಲ್ಲಿ ಅಯ್ಯನ್ ಕಾಳಿ ಅವರ ಬದುಕು ಅನಾವರಣಗೊಂಡಿದೆ.
ಪುಸ್ತಕದ ಕುರಿತು ’ಅವಧಿ’ ಆನ್‌ಲೈನ್ ಪತ್ರಿಕೆಯಲ್ಲಿ ಬರೆದಿರುವ ಚಿಂತಕ ಡಾ. ಅಪ್ಪಗೆರೆ ಸೋಮಶೇಖರ್, ’ಭಾರತೀಯ ಜಾತಿವಾದಿ ಸಮಾಜವು ಚರಿತ್ರೆಯ ಕರಾಳ ಗರ್ಭದಲ್ಲಿ ಮರೆಮಾಚಿರುವ ದಲಿತ ಹೋರಾಟಗಾರರ ಇತಿಹಾಸವನ್ನ ಪುನರ್ ಶೋಧಿಸುವ ಮೂಲಕ ದಲಿತರ ಸಾಂಸ್ಕೃತಿಕ ಚರಿತ್ರೆಯನ್ನು ಹೊಸದಾಗಿ ರೂಪಿಸಬೇಕಿದೆ. ಆ ಮೂಲಕ ಪ್ರಸ್ತುತ ದಲಿತ ಚಳವಳಿಯು ತನ್ನ ಹೋರಾಟದ ನೆಲೆ-ನಿಲುವುಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ಜೊತೆಗೆ ಭಾರತೀಯ ಶೋಷಿತರಲ್ಲಿ ಸ್ವಾಭಿಮಾನದ ಸಾಂಸ್ಕೃತಿಕ ಅಸ್ಮಿತೆಯನ್ನು ಜಾಗೃತಗೊಳಿಸುವ ತುರ್ತಿದೆ. ಭಾರತೀಯ ದಲಿತ ಚಳವಳಿಗೆ ಸುದೀರ್ಘವಾದ ಇತಿಹಾಸವಿದೆ. ಇಂತಹ ದಲಿತ ಚಳವಳಿಯನ್ನು ರೂಪಿಸಿದ ಮಹಾನ್ ಚೇತನಗಳಲ್ಲಿ ಮಹಾರಾಷ್ಟ್ರದ ಸ್ವತಂತ್ರ ಮಹಾರ್ ಬಟಾಲಿಯನ್ನ ಸೇನಾದಿಪತಿ ‘ಶಿದನಾಕ’ ಹಾಗೂ ಕೇರಳಾದ ದಲಿತ ಹೋರಾಟಗಾರ ‘ಅಯ್ಯನ್ಕಾಳಿ’ ಪ್ರಮುಖರು. ಸ್ವಾತಂತ್ರ ಪೂರ್ವದಲ್ಲೆ ಅಂದರೆ, 1818 ಜನವರಿ 1 ರಂದು ಶಿದನಾಕ ತನ್ನ ಮಹಾರ್ ಸೈನ್ಯದ ಜೊತೆಗೂಡಿ ಜಾತಿವಾದಿ ಪೇಶ್ವೆಗಳ ಅಸ್ಪೃಶ್ಯತಾಚರಣೆಯ ವಿರುದ್ಧ ಹೋರಾಡಿ ಗೆದ್ದ ಕೋರಿಗಾಂವ್ ವಿಜಯೋತ್ಸವ; 1904ರಂದು ಕೇರಳಾದ ಜಾತಿವ್ಯವಸ್ಥೆಯ ವಿರುದ್ಧ ಬಂಡೇಳುವ ಮೂಲಕ ದಲಿತರಿಗೆ ಸ್ವಾಭಿಮಾನ, ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಟ್ಟ ಕ್ರಾಂತಿಕಾರಿ ಅಯ್ಯನ್ಕಾಳಿ ಅವರ ಹೋರಾಟ ಇವತ್ತಿನ ದಲಿತ ಹೋರಾಟಕ್ಕೆ ದಾರಿದೀಪವಾಗಬೇಕಿದೆ’ ಎಂದಿದ್ದಾರೆ.
©2024 Book Brahma Private Limited.