‘ಬೆಟಗೇರಿ ಕೃಷ್ಣಶರ್ಮ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆಯಲ್ಲಿ ಪ್ರಕಟವಾದ ಕೃತಿ. ಬೆಟಗೇರಿ ಕೃಷ್ಣಶರ್ಮರು ಆನಂದಕಂದ ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದವರು. ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ಎಂದು ಹಾಡಿ ನಾಡು ನುಡಿಯ ಕುರಿತು ಪ್ರೇಮ ಬೆಳೆಸಿದವರು. ಅವರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು. ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.
ಕೃಷ್ಣಶರ್ಮರು ಬಾಲ್ಯದಿಂದಲೆ ಕವನರಚನೆ ಪ್ರಾರಂಭಿಸಿದ್ದರು. ರಾಷ್ಟ್ರೀಯ ಚಳುವಳಿಗಾಗಿ, ಕನ್ನಡ ಸ್ವಯಂಸೇವಕರಿಗಾಗಿ, ಕಾಂಗ್ರೆಸ್ ಅಧಿವೇಶನಗಳಿಗಾಗಿ ಅವರು ಕವನ ರಚಿಸಿ ಕೊಟ್ಟರು. ಅವರ ಪ್ರಥಮ ಕವನ 'ಭಕ್ತಿ ಕುಸುಮಾವಳಿ 1918ರಲ್ಲಿ ಪ್ರಭಾತ' ಪತ್ರಿಕೆಯಲ್ಲಿ ಪ್ರಕಟವಾಯಿತು. ಕೇವಲ ಕನ್ನಡ ಮುಲ್ಕಿ ಪರೀಕ್ಷೆಯನ್ನು ಮಾಡಿಕೊಂಡ ಕೃಷ್ಣಶರ್ಮರು ಇಂಗ್ಲಿಶ್ ಕಲಿಯಲಿಲ್ಲ. ಆದರೂ ಅವರು ವಿದ್ವತ್ತು ಅಗಾಧವಾದದ್ದು. ಸಂಶೋಧನೆ, ಜಾನಪದ ಕ್ಷೇತ್ರಗಳಲ್ಲಿ ಮೌಲಿಕವಾದ ಕಾರ್ಯ ಅವರಿಂದ ಆಗಿದೆ. ಅಂತಹ ಮಹನೀಯರ ಬದುಕು ಬರಹದ ಕುರಿತಾದ ಕಿರು ಹೊತ್ತಿಗೆಯನ್ನು ಲೇಖಕ ರವೀಂದ್ರ ಕರ್ಜಗಿಯವರು ಅರ್ಥಪೂರ್ಣವಾಗಿ ರಚಿಸಿದ್ದಾರೆ.
©2024 Book Brahma Private Limited.